Friday, December 16, 2011

simhachala and vishaakhapattana visit.






ಸಿಂಹಾಚಲ ಮತ್ತು ವಿಶಾಖಪಟ್ಟಣ
ವಿಶಾಖಪಟ್ಟಣಕ್ಕೆ ಇದು ನನ್ನ ಐದನೆಯ ಭೇಟಿಯಾಗಿತ್ತು.ಈ ಸಾರಿ ಹೆಂಡತಿಯೊಂದಿಗೆ ಭೇಟಿ.  ವಿಶಾಖಪಟ್ಟಣದಿಂದ ಕೇವಲ ೧೫ ಕಿ ಮೀ ದೂರ ಗುಡ್ಡಗಳ ಮಧ್ಯೆ ಇರುವ ದೇಗುಲ. ಇತಿಹಾಸ ಇದರ ಸ್ಥಾಪನೆಯನ್ನು ೧೦ನೆಯ ಶತಮಾನಕ್ಕೆ ಕೊಂಡೊಯ್ಯುತ್ತದೆ.ವಿಕಿಪೀಡಿಯಾದಲ್ಲಿ ಅನೇಕ ವಿವರಗಳಿವೆ.ಕಳಿಂಗದ ರಾಜರು,ಚೋಳರು ವಿಜಯನಗರದ ಅರಸರು ಸಾಕಷ್ಟು ದಾನದತ್ತಿಗಳನ್ನು ಕೊಟ್ಟಿರುತ್ತಾರೆ.
ನೇರವಾಗಿ ವಿಮಾನ ನಿಲ್ದಾಣದಿಂದ ಸಿಂಹಾಚಲಕ್ಕೆ ನಮ್ಮ ಪ್ರಯಾಣ. ಸುಮಾರು ಏಳೆಂಟು ಕಿ ಮೀ ದೂರ. ಗುಡ್ಡಗಳ ನಡುವೆ ಸಾಕಷ್ಟು ಒಳ್ಳೆಯ ರಸ್ತೆ.ಏರಿಳಿದು ನಾಲ್ಕು ಗುಡ್ಡಗಳ ನಡುವೆ ಎತ್ತರವಾದ ಸ್ಥಳದಲ್ಲಿ ನಿರ್ಮಾಣವಾದ ವಿಸ್ಸಲ ದೇಗುಲ. ೨೫ ವರ್ಷಗಳ ಕೆಳಗೆ ಭೇಟಿ ಕೊಟ್ಟಾಗ ಯಾವ ಅಭಿವೃದ್ದಿ ಕಾರ್ಯ ಗಳು ಆಗಿರಲಿಲ್ಲ. ದಾರಿಯುದ್ದ ಬರೀ ಭಿಕ್ಷುಕರೇ ತುಂಬಿದ್ದರು. ಈಗ ಸಾಕಷ್ಟು ಕೆಲಸಗಳಾಗಿವೆ. ಡಾಮರು ರಸ್ತೆ ಆಗಿದೆ.ದೇವಾಲಯದವರೆಗೂ ಕಾರಿನಲ್ಲೇ ಹೋಗಬಹುದು. ಹತ್ತಲು ಮೆಟ್ಟಿಲುಗಳಿವೆ.ದೊಡ್ಡ ಹನುಮಂತನ ವಿಗ್ರಹ ನಿಮ್ಮನ್ನು ಸ್ವಾಗತಿಸುತ್ತದೆ.
ಸಿಂಹಾಚಲ ಹೆಸರೇ ಹೇಳುವಂತೆ ಲಕ್ಷ್ಮೀನರಸಿಂಹನ ಆವಾಸ ಸ್ಥಾನ. ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಭೂಮಿಗಿಳಿದ ಭಗವಂತ. ಅವನ ಭಾರಕ್ಕೆ ಕಾಲುಗಳು ನೆಲದಲ್ಲಿ ಹೂತು ಹೋಗಿವೆಯಂತೆ.ಮೇಲ್ಭಾಗವನ್ನೆಲ್ಲ ಚಂದನದಲ್ಲಿ ಪೂರ್ಣ ಮುಚ್ಚಿರುತ್ತಾರೆ.
ಉಗ್ರ ನರಸಿಂಹನ ಸಾಂತ್ವನಕ್ಕೆ ಚಂದನದ ಲೇಪ.ವರ್ಷಕ್ಕೊಮ್ಮೆ ಅಕ್ಷಯ ಚಂದನ ಲೇಪ ತೆಗೆದಾಗ ಮೂರ್ತಿ ಕಾಣಿಸುತ್ತದೆ. ದೇವಾಲಯದ ಒಳಗೆ ಎಲ್ಲೂ ಫೋಟೋ ತೆಗೆಯುವಂತಿಲ್ಲ. ಸೆಲ್ ಫೋನ್ ಗಳನ್ನೂ ತೆಗೆದು ಕೊಂಡು ಹೋಗುವಂತಿಲ್ಲ.
ದೇವಾಲಯ ಕಲ್ಲಿನದು. ಹೊರಗೆ ಗೋಡೆಗಳ ಮೇಲೆ ಮೂರ್ತಿಗಳು ಅಲ್ಲಲ್ಲೇ. ಹಿಂಭಾಗದಲ್ಲಿ ನರಸಿಂಹನ ಉಗ್ರಾವತಾರದ ಕೆತ್ತನೆ. ಮಿಥುನ ಶಿಲ್ಪಗಳು ಉಂಟು. ಪ್ರಾಂಗಣದಲ್ಲಿ ಸೌಕರ್ಯಗಳು ಕಡಿಮೆ. ಚಳಿಗಾಲವಾದ್ದರಿಂದ ಅಷ್ಟೇನೂ ಕಷ್ಟವಾಗಲಿಲ್ಲ. ಗರ್ಭ ಗುಡಿಯೊಳಗೆ ಹವಾನಿಯಂತ್ರಕಗಳಿವೆ.ದೇವಾಲಯದ ಹೊರಹೊರಭಾಗದಲ್ಲಿ ಅಚ್ಚುಕಟ್ಟು ಇಲ್ಲ. ಮಣ್ಣಿನ ರಸ್ತೆಗಳು.ಬಂದಿಳಿಯುವವರಿಗೆ ಛತ್ರದ ಸೌಕರ್ಯವಿದೆ ಯಂತೆ.  ಗುಡ್ಡದ ಮೇಲೆ ಬರಲು ಹೋಗಲು ಬಸ್ ಸೌಕರ್ಯವಿದೆ.
ಸುಂದರ ಪ್ರಕೃತಿ ತಾಣ ನೋಡಲು ಅಂದ ದೇವಾಲಯದ ಸುತ್ತಲು ೨-೩ ಕಿ ಮೀ ನಲ್ಲಿ ಬರೀ ಗುಡ್ಡಗಳು ಒಂದಕ್ಕೆ ಕಣಜದ ಗುಡ್ಡ ಎಂದು ಕರೆಯುತ್ತಾರೆ. ಮುಸ್ಲಿಮರ ಆಕ್ರಮಣ ಕಾಲದಲ್ಲಿ ದೇವಾಲಯದ ನಾಶಕ್ಕೆ ಪ್ರಯತ್ನಿಸಿದಾಗ ಪೂಜಾರಿಯ ಪ್ರಾರ್ಥನೆಯಂತೆ ಎದುರಿನ ಗುಡ್ಡದಿಂದ ಕಣಜಗಳ ದಂಡೇ ಮುಟ್ಟಿ ಸೈನಿಕರೆಲ್ಲ ಓಡಿ ಹೋಗಿ ದೇವಾಲಯವನ್ನು ಸ್ವಾಮಿ ರಕ್ಷಿಸಿದನೆಂದು ಕಥೆಯೂ ಉಂಟು.
ಕಳಿಂಗದ ರಾಜರುಏ ದೇವಾಲಯದ ಭಕ್ತರು.ಕೃಷ್ಣದೇವರಾಯ ಎರಡು ಬಾರಿ ಇಲ್ಲಿಗೆ ಬಂದಿದ್ದನಂತೆ.ಕಳಿಂಗದ ಪ್ರತಾಪ ರುದ್ರನನ್ನು ಸೋಲಿಸಿ ಹಿಂದಿರುಗುವಾಗ ಒಮ್ಮೆ.
ನೂರು ರುಪಾಯಿ ಕೊಟ್ಟು ವಿಶೇಷ ದರ್ಶನ ಪಡೆದು ತಿರುಪತಿಯಂತೆ ಇಲ್ಲೂ ಲಡ್ಡುಗಳ ಪ್ರಸಾದ ಪಡೆದೆವು. ಒಳಗೆ ಚಿತ್ರಾನ್ನ ಉಚಿತ ಪ್ರಸಾದ ವಿನಿಯೋಗವು ಇದೆ ಕುಡಿಯಲು ನೀರು ಒಯ್ಯುವುದು ಒಳ್ಳೆಯದು.
೩ ಗಂಟೆಗೆ ಹಿಂತಿರುಗಿ ವಿಶಾಖ ಪಟ್ಟಣ ಸೇರಿ ಇರುವ ಒಳ್ಳೆಯ ಒಂದೇ ಹೋಟೆಲ್ ದಾಸಪಲ್ಲದಲ್ಲಿ ತಂಗಿದೆವು .
ಸ್ಪೈಸ್ ಜೆಟ್ ಎ ಟಿ ಆರ್. ಸುಮಾರು ಒಂದೂವರೆ ಗಂಟೆಗಳಲ್ಲಿ ಪ್ರಯಾಣ ಮುಗಿಸುತ್ತದೆ. ಬಜೆಟ್ ಏರ್ಲೈನ್ ಆದ್ದರಿಂದ ಊಟ ತಿಂಡಿ ಕೊಳ್ಳಬೇಕು. ನೀರು ಪುಕ್ಕಟ್ಟೆ ಕೊಡುತ್ತಾರೆ.



Sunday, May 15, 2011

visit to Honnavalli,Tiptur taluk.


ಹೊನ್ನವಳ್ಳಿ ಇದು ತಿಪಟೂರು ತಾಲೂಕಿನ ಒಂದು ದೊಡ್ಡ ಹಳ್ಳಿ ಈಗ.ಆದರೆ ಇತಿಹಾಸದಲ್ಲಿ ಬಹಳ ಹೆಸರಾದ ಸ್ಥಳ. ೮೦೦ ವರ್ಷಗಳಿಗು ಹಿಂದೆ ಒಬ್ಬ ಪಾಳ್ಳೆಗಾರನಿಂದ ಸ್ತಾಪಿಸಲ್ಪಟ್ಟ ಹಳ್ಳಿ.ಹಾರನಹಳ್ಳಿ ರಾಜ್ಯದ ಗಡಿ ಸೀಮೆಯಾದ್ದರಿಂದ ಇಲ್ಲಿ ಒಂದು ಕೋಟೆ ಕೂಡ ಇದೆ.ಹೊಯ್ಸಳರು,ನಂತರ ವಿಜಯನಗರದ ಅರಸರು ನಂತರ ಇಕ್ಕೇರಿಯ ನಾಯಕರು ಆಳಿ ಮೈಸೂರು ಅರಸರ ಕೈ ಸೇರಿತು. ಹೈದರನ  ನಂತರ  ಮತ್ತೆ ಮೈಸೂರರಸರ ಕೈಗೆ ಬಂತು. ಹೊನ್ನವಳ್ಳಿ ಹೆಸರಾದದ್ದೆ ಆ ಊರಿಗೆ ಹೊನ್ನಿನ ಮಳೆ ಸುರಿದಿದ್ದರಿಂದ ಅಂತೆ. ಊರಿನಲ್ಲಿ ೨೪ ದೇವಾಲಯಗಳಿವೆ ,೨೪ ರಲ್ಲು ಈಗಲು ಪ್ರತಿದಿನ ಪೂಜೆ ನಡೆಯುತ್ತದೆ.ದೊಡ್ಡದೆಂದರೆ ಲಕ್ಶ್ಮಿನರಸಿಂಹಸ್ವಾಮಿ, ಹೊಯ್ಸಳರ ಕಾಲದ್ದೆಂದು ಪ್ರತೀತಿ. ಮಾದರಿ ಯೇನೊ ಅವರದ್ದೆ. ಆದರೆ ಸಾಧಾರಣ.ಒಳ ಅಥವ ಹೊರ ಗೋಡೆಗಳ ಮೇಲೆ ಅಲಂಕಾರಗಳೇ ಇಲ್ಲ. ಪೂಜೆಗೊಳ್ಳುವ ವಿಗ್ರಹಗಳು ಮಾತ್ರ ಸುಂದರ.



ನಮ್ಮ ಗುರು ಪುತ್ರ ಕೃಷ್ಣಮೂರ್ತಿಯ ಕೃಪೆ ಇಂದಿನ ನಮ್ಮ ಭೇಟಿ ಅಲ್ಲಿಗೆ. ಹೋಮ ಹವನ ಪ್ರವಚನಗಳು ಎಲ್ಲ ಇತ್ತು.ಕೈಲಾಸೇಶ್ವರ ದೇವಾಲಯ ಊರ ಹೊರಗೆ ತೋಟದಲ್ಲಿ. ಪುರಾತನ ವಾದರು ಅತಿ ಸಾಧಾರಣ.ತಲೆ ಬಗ್ಗಿಸಿ ಒಳಗೆ ಹೋಗಬೇಕು. ಆರಡಿ ಎತ್ತರದ ಛಾವಣಿ. 






Monday, April 18, 2011

ಬೆಳವಾಡಿ ಮತ್ತು ಜಾವಗಲ್ ದೇಗುಲಗಳು

ಭಾನುವಾರ, ಏಪ್ರಿಲ್ ೧೭ ರಂದು ಹುಟ್ಟಿದೂರಿಗೆ ಭೇಟಿ ಮಾಮೂಲಿನಂತೆ. ದಿನದ ಘಟನೆಗಳು ಮನಸ್ಸನ್ನು ಕಲಕಿದ್ದವು. ದಾಸವರೇಣ್ಯ ಪುರಂದರ ದಾಸರ ಪದ ನೆನಪಿಗೆ ಬರುತ್ತಿತ್ತು. ಮುನ್ನ ಶತ ಕೋಟಿ ರಾಯರುಗಳಾಳಿದ ಭೂಮಿಯನು ತನದೆಂದು--. ಮಹಭಾರತ ಯುದ್ಧ ಏಕೆ ನಡೆಯಿತೆಂದು ಪದೇ ಪದೇ ಮನಸ್ಸು ಕೇಳುತ್ತಿತ್ತು,ಹೇಳುತ್ತಿತ್ತು. ದುರ್ಯೋಧನ ಕೆಟ್ಟವನೇನಲ್ಲ ವೆಂದೆನಿಸುತ್ತಿತ್ತು. ಹಸ್ತಿನಾಪುರದ ರಾಜ ತಾನೆ ಆಗಬೇಕೆಂದಿದ್ದರೂ ಅನುಜರನ್ನು ಅಸಭ್ಯವಾಗಿ ನಡೆಸಿ ಕೊಂಡವನೇನಲ್ಲ. ಇಂದಿನ ದುರ್ಯೋಧನರು ಹಾಗೇನಲ್ಲ????.

ಮಾನಸಿಕ ತುಮುಲಕ್ಕೆ ಒಳಗಾಗಿದ್ದ ನನಗೆ ಶಾಂತಿ ಬೇಕಿತ್ತು. ಅದೇನೊ ಸಂದರ್ಭ ಒದಗಿ ಬಂತು. ನಮ್ಮೂರಿನಿಂದ ಕೇವಲ ೫೦-೬೦ ಕಿ ಮೀ ದೂರದಲ್ಲಿದ್ದ ಹೊಯ್ಸಳರ ಶಿಲ್ಪಕಲೆಗೆ ಸಾಕ್ಷಿಯಾಗಿದ್ದ ಎರಡು ದೇವಾಲಯಗಳ ದರ್ಶನ ಲಭಿಸಿತು.

ಕ್ರಿಕೆಟರ್ ಶ್ರೀನಾಥ ನ ಜಾವಗಲ್ಲಿನ ಲಕ್ಷ್ಮಿನರಸಿಂಹ ಮತ್ತು ಬೆಳವಾಡಿಯ ವೀರನಾರಾಯಣ. ಜಾವಗಲ್ಲಿನದು ಚಿಕ್ಕದು,ತ್ರಿಕೂಟಾಚಲ. ಬೆಳವಾಡಿಯದೂ ತ್ರಿಕೂಟಾಚಲ. ಆದರೆ ಗಾತ್ರದಲ್ಲಿ ಬಹಳ ದೊಡ್ಡದು. ಜಾವಗಲ್ಲಿನ ದೇವಾಲಯ ಶಿಥಿಲಾವಸ್ಥೆಯಲ್ಲಿದೆ,ಆದರೆ ಈಗ ನವೀಕರಣ ನಡೆಯುತ್ತಿದೆ.

ದೇವಾಲಯದ ಹೊರ ಗೋಡೆಗಳೆಲ್ಲ ಕೆತ್ತನೆಗಳಿಂದ ಅಲಂಕೃತ. ಒಳಗೆ ತ್ರಿಕೂಟ ಗರ್ಭ ಗೃಹಗಳ ಮಧ್ಯೆ ಚಿಕ್ಕಮಂಟಪ,ಚೊಕ್ಕ ಸುಂದರ ದೇವಾಲಯ.

ಬೆಳವಾಡಿ ಜಾವಗಲ್ಲಿನಿಂದ ೭ ಕಿ ಮೀ ,ಬೇಲೂರು ಚಿಕ್ಕಮಗಳೂರು ರಸ್ತೆಯಲ್ಲಿದೆ. ಸುತ್ತ ಸುಂದರ ಹುಲ್ಲು ಹಾಸು ಮಧ್ಯೆ ಸುಸ್ಥಿತಿಯಲ್ಲಿರುವ ದೇವಾಲಯ.ಬೇಲೂರು ಹಳೇಬೀಡು ದೇವಾಲಯಗಳಿಗಿಂತ ಸ್ವಲ್ಪ ಭಿನ್ನವಾದರು ಅಷ್ಟೇ ದೊಡ್ಡದು. ಮೂರು ಗರ್ಭಗೃಹಗಳು,ಶುಕನಾಸ,ಮಂಟಪ ಅಲ್ಲದೆ ದೊಡ್ಡದಾದ ದ್ವಾರಮಂಟಪ.

ಗರ್ಭಗೃಹಗಳಿಗೆ ಹೊರ ಮೈಮೇಲೆ ಹೊಯ್ಸಳ ಶಿಲ್ಪಿಗಳ ಕೈ ಚಳಕದಿಂದ ಮೂಡಿ ಬಂದ ಶಿಲ್ಪಗಳು.ಅದು ಬಿಟ್ಟರೆ ಬೇರೆಲ್ಲೂ ಶಿಲ್ಪಗಳಿಲ್ಲ ದ್ವಾರದಲ್ಲಿ ಎರದು ಬೃಹತ್ ಆನೆಗಳು.ಆದರೆ ಎಲ್ಲು ಹೊಯ್ಸಳ ಲಾಂಛನ ಕಾಣಲಿಲ್ಲ.

ತ್ರಿಕೂಟಾಚಲದ ಗರ್ಭಗೃಹಗಳಲ್ಲಿರುವ ಪ್ರತಿಮೆಗಳು ವೀರನಾರಾಯಣ , (ಇದೇ ದೇವಾಲಯದ ಹೆಸರು), ಯೋಗಾನರಸಿಂಹ ಮತ್ತು ಗೋಪಾಲಕೃಷ್ಣ. ಗೋಪಾಲ ಕೃಷ್ಣ ಮೂರ್ತಿ ವಾಸ್ತು ಶಿಲ್ಪದ ನಿಯಮಗಳಿಗೆ ಅನುಗುಣವಾಗಿ ನಿರ್ಮಿಸಿರುವ ಭಾರತದಲ್ಲೆ ಅತ್ಯಂತ ಸುಂದರ ಮೂರ್ತಿ ಎಂದು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯವರ ಅಂಬೋಣ.

ಶಾಸನಗಳಿಗಾಗಿ ಹುಡುಕಾಡಿದೆ.ಒಂದು ಹೊರಗಿನ ದ್ವಾರ ಮಂಟಪದಲ್ಲಿದೆ.ಓದಲು ಅಕ್ಷರಗಳು ಸ್ಫುಟವಾಗಿರಲಿಲ್ಲ. ಒಂದೆರಡು ಸಾಲು ಮಂಟಪದ ಮೇಲಿದೆ.

ಬೆಳವಾಡಿ,ಹಳೆಬೀಡಿನಿಂದ ಕೇವಲ ೧೦ ಕಿ ಮೀ ದೂರ,ಬೇಲೂರಿನಿಂದ ೧೩ ಕಿ ಮೀ ಮತ್ತು ಜಾವಗಲ್ಲಿನಿಂದ ೭ ಕಿ ಮೀ ದೂರದಲ್ಲಿದೆ. ಹಾಸನಕ್ಕೆ ೩೦ ಕಿ ಮೀ ಮತ್ತು ಅರಸಿಕೆರೆಯಿಂದ ೪೦ ಕಿ ಮೀ ದೂರದಲ್ಲಿದೆ.ಚಿಕ್ಕಮಗಳೂರು ಜಿಲ್ಲೆಗೆ ಸೇರಿದೆ. ನನ್ನ ಮಿತ್ರ ರಾದ ದಿ: ಕೃಷ್ಣ ಮೂರ್ತಿ ಎಮ್ ಎಲ್ ಸಿ ಯವರ ಊರು.ನೆನಪಿಗೆ ಬಂದರು.

ಈಗ ಪ್ರಾಚ್ಯ ವಸ್ತು ಇಲಾಖೆಯವರ ಆದೇಶದಿಂದ ದೇವಾಲಯದ ಸುತ್ತ ೧೦೦ ಮೀ ತೆರವು ಗೊಳಿಸಬೇಕೆನ್ದು ಆದೇಶ ಬಂದಿದೆ.ನೂರಾರು ವರ್ಷಗಳಿಂದ ಸುತ್ತ ಮುತ್ತ ವಾಸವಾಗಿದ್ದವರಿಗೆ ಕಂಟಕ ಪ್ರಾಯ.ಕಾದು ನೋಡಬೇಕು.

ಬಹಳಷ್ಟು ದೇವಾಲಯಗಳ ದುಸ್ಥಿತಿಗೆ ಸುತ್ತಲಿನ ಜನರೇ ಕಾರಣ.ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಜ್ನೆ ಇಲ್ಲದ ಜನರಿಂದ ಸಾಕಷ್ಟು ಪುರಾತನ ಸ್ಮಾರಕಗಳು ನಾಶವಾಗಿವೆ,ಆಗುತ್ತಿವೆ.

ಮಾನವ ಇತಿಹಾಸದಲ್ಲೇ ಅತ್ಯುನ್ನತ ಶಿಲ್ಪಕಲಾ ದೇಗುಲಗಳ ಸೃ ಷ್ಟಿಗೆ ಕಾರಣರಾದ ಹೊಯ್ಸಳರ ನಾಡಿನಲ್ಲಿರುವ ನಾವು ಇದರ ಬಗ್ಗೆ ಯೋಚಿಸಬೇಕು.

ಮರೆತದ್ದು - ಇತ್ತೀಚೆಗೆ ನಾನು ನೋಡಿದ ದಂಬಳದ (ಗದಗ) ಕಲ್ಯಾಣದ ಚಾಲುಕ್ಯರ ದೊಡ್ಡಬಸಪ್ಪ ದೇವಾಲಯವೊಂದೆ ಪರಿಸರ ಕಾಪಾಡುವಲ್ಲಿ ಮತ್ತು ಸುಸ್ಥಿತಿಯಲ್ಲಿ ಇರುವ ಇನ್ನೊಂದು ಉದಾಹರಣೆ.

















Friday, January 21, 2011

Boranakanive

ಬೆಂಗಳೂರಿನಿಂದ  ೧೫೦ ಕಿ ಮೀ ದೂರದ ಬೋರನಕಣಿವೆ ಬಹಳ  ಜನರಿಗೆ ಗೊತ್ತಿಲ್ಲ ಅಂತ ಕಾಣುತ್ತೆ. ಸಿರಾ ಹುಳಿಯಾರ್ ರಸ್ತೆಯಲ್ಲಿ ಸುಮಾರು ಸಿರಾದಿಂದ ೩೫ ಕಿ ಮೀ ದೂರದಲ್ಲಿ ದೇ. ಸಿರಾವರೆಗೂ ಹೆದ್ದಾರಿ ಅಲ್ಲಿಂದ ಸಾಕಷ್ಟು ಹಾಳಾದ ರಸ್ತೆ.      ಬೋರನ ಕಣಿವೆ ಒಂದು ಮುದ್ದಾದ ಪುಟ್ಟ  ಅಣೆಕಟ್ಟೆ. ಎರಡು ಗುಡ್ಡಗಳನ್ನು  ತಾಟು ಹಾಕಿದ್ದಾರೆ. ೧೮೯೨ ರಲ್ಲಿ ಪೂರ್ಣಗೊಂಡ  ಈ ಕಟ್ಟೆ  ೨೫ ವರ್ಷಗಳಲ್ಲಿ ಮೊದಲ ಬಾರಿಗೆ ತುಂಬಿದೆ.  ಹತ್ತಿರದಲ್ಲೇ ವಿಧ್ಯುತ್ ಉತ್ಪಾದಿಸುವ ಗಾಳಿ ರಾಟೆಗಳು ಕಾಣ ಸಿಗುತ್ತವೆ.   ಅಲ್ಲಿ ಊಟ ತಿಂಡಿ ಏನು ಸಿಗೋಲ್ಲ.  ಎಲ್ಲ ನಾವೇ ಕೊಂಡೊಯ್ಯ ಬೇಕು. ಇನ್ನು ಹಾಳಾಗದ ಪರಿಸರ.    

Saturday, October 30, 2010

aalampura mattu raayachUru

ಅಂದು ಗುರುವಾರ.ಸಂಜೆ ಎಂಟು ಗಂಟೆಯ ಉದ್ಯಾನ್ ರೈಲಿನಲ್ಲಿ ನಿತೀಶನ ಜೊತೆ ಬಿ ೨ ಬೋಗಿಯಲ್ಲಿ ಕುಳಿತು ರಾಯಚೂರಿಗೆ ಹೊರಟೆ. ರೈಲು ಹೊರಡುವ ವೇಳೆಗೆ ೩ - ೪ ಜನ ಸಮ್ಮೇಳನಕ್ಕೆ ಹೊರಟಿದ್ದ ವೈದ್ಯರು ಸೇರಿಕೊಂಡರು. ನಾವೆಲ್ಲ ಹೊರಟಿದ್ದು ಕರ್ನಾಟಕ ರಾಜ್ಯ ಚರ್ಮ ವೈದ್ಯರ ಪ್ರಥಮ ಸಮ್ಮೇಳನ. ನಿತೀಶ ನನ್ನ ತಮ್ಮನ ಮಗ ನನಗೆ ಜೊತೆ ಅಷ್ಟೆ. ಒಂದು ದಿನ ಮುಂಚೆ ನಾನು ಹೊರಟಿದ್ದು ರಾಯಚೂರಿನಿಂದ ೧೦೦ ಕಿ ಮೀ ದೂರದಲ್ಲಿದ್ದ ಆಲಂಪುರ ಎಂಬ ಬಾದಾಮಿಯ ಚಲುಕ್ಯರ ಮೂಡಲ ಆಡಳಿತ ಕೇಂದ್ರ ನೋಡಲಿಕ್ಕೆ. ಪುಸ್ತಕ, ಅಂತರ್ಜಾಲ ಮತ್ತು ಕೇಳಿದ್ದ ಕಥೆ ಜಾಲಾಡಿ ಆಲಂಪುರದ ಮಾಹಿತಿ ಪಡೆದಿದ್ದೆ.ನಮ್ಮ ರೈಲು ಬೆಳಗಿನ ೬ ಗಂಟೆಗೆ ರಾಯಚೂರು ನಿಲ್ದಾಣ ತಲುಪಿತು. ಇಳಿದು ನಾನು ನಿತೀಶ ಬ್ಯಾಗ್ ಹಿಡಿದು ನಮಗಾಗಿ ಕಾದಿರಿಸಿದ್ದ ನೃಪತುಂಗ ಹೋಟೆಲ್ ಗೆ ಹೊರಟೆವು. ನಡೆದೆ ಹೋಗುವಷ್ಟು ದೂರದಲ್ಲಿದ್ದ ಅಲ್ಲಿಗೆ ಸುಮಾರು ೧೫ ನಿಮಿಷ ಬೇಕಾಯಿತು. ಮುಖ್ಯ ರಸ್ತೆ ದಾಂಬರು ಕಂಡು ಎಷ್ಟು ವರ್ಷ ಗೊತ್ತಿಲ್ಲ. ಎರ್ರ ಬಿರ್ರಿ ವಾಹನ ನಿಲುಗಡೆ, ಸಂಚಾರ ಅಲ್ಲಿ. ಆ ಬೆಳಗಿನಲ್ಲೆ. ಬರಿ ಧೂಳು. ನೃಪತುಂಗ ಅಷ್ಟೇನು ಅನುಕೂಲಕರ ಹೋಟೆಲ್ ಅಲ್ಲ. ಬಹಳ ಹಳೆಯ ಹೋಟೆಲ್ ಅಥವ ಅಷ್ಟು ಸೌಕರ್ಯ ಹೊಂದಿದ ಮೊದಲ ಹೋಟೆಲ್. ಆ ರಸ್ತೆಯಲ್ಲೆಲ್ಲ ಬರೀ ಹೋಟೆಲ್ಗಳೇ. ಕುಬೇರ ಸ್ವಲ್ಪ ಆಧುನಿಕ ಅನ್ನಿಸಿತು.
ಮುಂಜಾವಿನ ಸ್ನಾನ ಎಲ್ಲ ಮುಗಿಸಿ ಮೊದಲೆ ನಿರ್ಧರಿಸಿದ್ದ (ಡಾ. ಕಲ್ಲಪ್ಪನವರ ಕೃಪೆ) ಕಾರಿನಲ್ಲಿ ಆಲಂಪುರಕ್ಕೆ ಜ಼ಕೀರನ ಟ್ಯಾಕ್ಸಿಯಲ್ಲಿ ಹೊರಟೆವು. ಗೂಗಲ್ ನಲ್ಲಿ ನೋಡಿದ್ದ ನಕ್ಷೆಯಲ್ಲಿ ತೋರಿಸಿದಂತೆ ಗದ್ವಾಲ್ ಮೂಲಕ ಹೋಗುವ ರಸ್ತೆ ಹಿಡಿದೆವು.ಆಂಧ್ರ ಗಡಿ ಕೇವಲ ೧೫ ಕಿ ಮೀ ನಲ್ಲಿ. ಗದ್ವಾಲ್ ವರೆಗು ರಾಜ್ಯ ರಸ್ತೆ ಅಷ್ಟೇನು ಸರಿಯಿಲ್ಲ. ನಂತರ ಹೈದರಾಬಾದ್ -ಬೆಂಗಳೂರು ಹೆದ್ದಾರಿ. ಅದು ಹೆದ್ದಾರಿಯೋ ಏನೋ ಗೊತ್ತಾಗಲಿಲ್ಲ. ಎದುರಿನಿಂದ ಬರುವ ವಾಹನಗಳು, ಎತ್ತಿನಗಾಡಿಗಳು, ಅಡ್ಡ ದಿಡ್ಡಿ ರಸ್ತೆ ದಾಟುವ ಮೋಟಾರ್ ಬೈಸಿಕಲ್ ಸವಾರರು, ಸ್ವಲ್ಪ ಎಚ್ಚರ ತಪ್ಪಿದರೆ ಅಪಘಾತ ನಿಶ್ಚಿತ. ಬೀಚಂಪಲ್ಲಿ ಬಳಿ ತಿರುವು ಪಡೆದು ಸ್ವಲ್ಪ ದೂರ ಕ್ರಮಿಸಿ ಆಲಂಪುರಕ್ಕೆ ಎಡಕ್ಕೆ ತಿರುಗಿ ೧೫ ಕಿ ಮೀ ಕಚ್ಚಾ ರಸ್ತೆ ಯಲ್ಲಿ ಹೋಗಬೇಕು. ಅಲ್ಲಲ್ಲೆ ಕಿತ್ತು ಹೋದ ಎ ಎಸ್ ಐ ಫಲಕಗಳು. ಅಂತು ೧೧ ಗಂಟೆಗೆ ಆಲಂಪುರ ತಲುಪಿದೆವು. ನಮ್ಮ ಡ್ರೈವರ್ ಜ಼ಕೀರನಿಗೆ ದಾರಿ ಗೊತ್ತಿದ್ದರಿಂದ ಕಷ್ಟವಾಗಲಿಲ್ಲ. ಮೊದಲು ನಾವು ಕೇಳಿದ್ದು ಯಾರಾದರು ಗೈಡ್ ಗಳಿದ್ದಾರ ಅಂತ. ಯಾರು ಸಿಗಲಿಲ್ಲ. ನಿರಾಶೆಯಿಂದ ನಾವೆ ಮೊದಲು ಎಲ್ಲಕ್ಕಿಂತ ಹೊಸದಾಗಿದ್ದ ಜೋಗುಳಾಂಬ ದೇವಾಲಯಕ್ಕೆ ಹೊರಟೆವು.ಅರ್ಚನೆಗೆ ಚೀಟಿ ಕೊಂಡು ವಿಶಾಲ್ವಾದ ಪ್ರಾಂಗಣ ವನ್ನು ದಾಟಿ ದೇಗುಲ ಸೇರಿದೆವು. ಹಳೆಯ ದೇಗುಲ ಧಾಳಿಗೆ ಒಳಗಾಗಿ ಬಿದ್ದು ಹೋಗಿತ್ತು ಅದನ್ನು ೧೬ ನೆಯ ಶತಮಾನದಲ್ಲಿ ಮತ್ತೆ ಇತ್ತೀಚೆಗೆ ಪುನಃ ನಿರ್ಮಾಣ ಮಾಡಿದ್ದಾರೆ. ಜೋಗುಳಾಂಬ ೧೮ ಭಾರತದ ಶಕ್ತಿ ಪೀಠಗಳಲ್ಲಿ ಒಂದು. ಶಿವನ ಪತ್ನಿ ಸತಿ ಯಾಗ ಕುಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಶಿವ ಸತಿಯ ಶರೀರವನ್ನು ಹೊತ್ತು ತಿರುಗುತ್ತಿದ್ದಾಗ ಶರೀರದ ಭಾಗಗಳೆಲ್ಲ ಒಂದೊಂದಾಗಿ ಬೀಳತೊಡಗಿದುವು.ಆಕೆಯ ಗಲ್ಲದ ಭಾಗ ಬಿದ್ದ ಜಾಗ ಇದಾಗಿದ್ದುದರಿಂದ ಇದಕ್ಕೆ ಜೋಗುಳಾಂಬ ಎಂಬ ಹೆಸರು ಬಂತೆಂದು ಪುರಾಣದ ಕಥೆ. ಅದೇನೆ ಇರಲಿ ಚಿಕ್ಕ ಚೊಕ್ಕ ಸುಂದರ ದೇಗುಲ. ಪ್ರತಿನಿತ್ಯ ಬೆಳಗ್ಗೆ ೭ರಿಂದ ಸಂಜೆ ೭ ರವರಗೆ ಪೂಜೆ(೧ ರಿಂದ ೨ ರ ವರೆಗೆ ಬಿಡುವು). ನಂತರ ಅಲ್ಲಿಂದ ಹೊರಟು ಉಳಿದ ದೇವಾಲಯಗಳನ್ನು ನೋಡಲು ಹೊರಟೆವು.ಬಾಲ ಬ್ರಹ್ಮ ದೇವಾಲಯದಲ್ಲಿ ಪೂಜೆಯ ನಂತರ ಅಲ್ಲಿಯ ಅರ್ಚಕರ್ ಪರಿಚಯ ವಾಯಿತು.ಅವರು ಕನ್ನಡ ಮಾತಾಡುತ್ತಿದ್ದದ್ದರಿಂದ ಕೆಲವು ವಿಷಯ ತಿಳಿಯಿತು. ಗಣಪತಿ ಶರ್ಮ ಎಂಬುವರು ಆಲಂಪುರ ದ ದೇವಾಲಯಗಳ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ, ಮಾನ್ಯುಮೆಂಟ್ಸ್ ಆಫ಼್ ಆಲಂಪುರ. ಅವರ ಸಹಾಯಕರಾಗಿದ್ದ ರಂಗನಾಥ ಎಂಬುವರು ಜೋಗುಳಾಂಬ ದೇಗುಲದಲ್ಲಿ ನೌಕರ ರಾಗಿದ್ದಾರೆಂದು ತಿಳಿದು ಅವರನ್ನು ಹುಡುಕಿ ಕೊಂಡು ಹೊರಟೆವು.
ದೇಗುಲದಲ್ಲಿ ಅರ್ಚನೆಗೆ ಚೀಟಿ ಕೊಡುತ್ತಿದ್ದ ವ್ಯಕ್ತಿಯೆ ರಂಗನಾಥ ಎಂದು ಗೊತ್ತಾಗಿ ಅವರ ಸಹಕಾರ ಕೋರಿದೆ. ಅವರು ಪುರಾತತ್ವ ದಲ್ಲಿ ವಿದ್ಯಾಭ್ಯಾಸ ಮಾಡಿರುವುದು ತಿಳಿಯಿತು. ನಮ್ಮ ಆಸಕ್ತಿ ಕಂಡು ಅರ್ಧ ಗಂಟೆ ನಮ್ಮೊಡನೆ ಬಂದು ನವ ಬ್ರಹ್ಮ ದೇಗುಲಗಳ ಬಗ್ಗೆ ತಿಳಿಸಿದರು. ಅಲ್ಲಿಯ ರಾಜ ರಸಸಿದ್ಧರೊಡನೆ(ಆಲ್ಕೆಮಿಸ್ಟ್) ರಸ ಕುಂಭಕ್ಕಾಗಿ ಹೋರಾಡಿದ್ದು ರಸ ಸಿದ್ದ ಆತ್ಮಾರ್ಪಣೆ ಮಾಡಿ ಕೊಂಡಿದ್ದು ಅವನ ಹೆಂಡತಿ ಆಗ ಗರ್ಭಿಣಿಯಾಗಿದ್ದು ಅವಳಿಗೆ ಹುಟ್ಟಿದ ಮಗನನ್ನು ಅಲ್ಲಿಯವರು ರಂಡಿಪುತ್ರನೆಂದು ಹೀಯಾಳಿಸಿದ್ದು, ಆತ ಕಾಶಿಗೆ ಹೋಗಿ ವಿಶ್ವೆಶ್ವರನನ್ನೆ ತಾನು ಯಾರೆಂದು ಕೇಳಿದ್ದು, ವಿಶ್ವನಾಥ ಅವನಿಗೆ ತನ್ನ ಮಗನೆ ನೀನು ಎಂದು ಹೇಳಿದ್ದು ನಂತರ ಆಲಂಪುರಕ್ಕೆ ಹೋಗಿ ದೇಗುಲಗಳ ನಿರ್ಮಾಣ ಮಾಡಿದ್ದು ತಿಳಿಸಿದರು. ಇದು ಎಷ್ಟು ಸತ್ಯವೋ, ಎಷ್ಟು ಪೌರಾಣಿಕವೊ ಆದರೆ ದೇಗುಲಗಳಿರುವುದಂತು ನಿಜ. ನವ ಬ್ರಹ್ಮ ಆದರೆ ಇವು ಯಾವುವು ಬ್ರಹ್ಮನ ದೇಗುಲಗಳಲ್ಲ.ಎಲ್ಲವು ಈಶ್ವರನ ದೇವಾಲಯಗಳು. ಇಲ್ಲಿರುವುದೆಲ್ಲವು ಶಿವ ಲಿಂಗಗಳು. ಒಂದಲ್ಲ ಎರಡಲ್ಲ ನೂರಾರು.ಕಾಲು ಕಾಲಿಗೆ ಎಡತಾಕುವ ಲಿಂಗಗಳು. ಬ್ರಹ್ಮ ಒಂದು ಸುಳ್ಳು ಹೇಳಿ ಪ್ರಾಯಶ್ಚಿತ್ತ ಮಾಡಿ ಕೊಂಡದ್ದರಿಂದ ಇಲ್ಲಿ ಎಲ್ಲವು ಬ್ರಹ್ಮೇಶ್ವರ. ಬಾಲಬ್ರಹ್ಮ,ಅರ್ಕ ಬ್ರಹ್ಮ, ಪದ್ಮಬ್ರಹ್ಮ,ವಿಶ್ವಬ್ರಹ್ಮ,ಸ್ವರ್ಗಬ್ರಹ್ಮ,ಗರುಡಬ್ರಹ್ಮ,ವೀರಬ್ರಹ್ಮ,ಕುಮಾರಬ್ರಹ್ಮ ಮತ್ತು ತಾರಕ ಬ್ರಹ್ಮ. ಬಾಲಬ್ರಹ್ಮ ಒಂದೆ ಪೂಜೆಗೊಳ್ಳುತ್ತಿರುವ ದೇವಾಲಯ. ಇದನ್ನು ಈಶಾನಾಚಾರ್ಯ ಎಂಬುವನು ಚಳುಕ್ಯ ಚಕ್ರೇಶ್ವರ ವಿಜಯಾದಿತ್ಯ ನಿಗೋಸ್ಕರ ನಿರ್ಮಿಸಿದ.(ಶಾ ಶಕೆ ೬೩೬).
೨೦೦೯ ರ ಪ್ರವಾಹ ದಲ್ಲಿ ಇಲ್ಲಿಯ ಜೋಗುಳಾಂಬ ದೇವಾಲಯದ ಶಿಖರದ ವರೆಗು ನೀರು ಬಂದಿತ್ತು. ಎಲ್ಲ ದೇವಾಲಯಗಳು ಮುಳುಗಿ ಹೋಗಿದ್ದವು. ರಂಗನಾಥ ಹೇಳಿದಂತೆ ರಾತ್ರಿ ೭ ಗಂಟೆಗೆ ಕರ್ನೂಲಿನ ಬಳಿ ಇರುವ ಬ್ಯಾರೇಜ್ ಒಡೆದು ನೀರು ಏರಲಾರಂಭಿಸಿತು. ಆಲಂಪುರ ನಾಗರಿಕರೆಲ್ಲ ಒಂದೆರಡು ಗಂಟೆಗಳಲ್ಲಿ ಊರು ಖಾಲಿ ಮಾಡಿದರು. ಪೂರ್ಣ ಊರು ನೀರಿನಲ್ಲಿ ಮುಳುಗಿ ಹೋಯಿತು. ರಂಗನಾಥರ ಬಳಿಯಿದ್ದ ೮೦೦ ಆಲಂಪುರದ ಮಾಹಿತಿಯಿದ್ದ ಪುಸ್ತಕಗಳೆಲ್ಲ ನೀರು ಪಾಲಾಯಿತು.
ಇಲ್ಲಿ ಬ್ರಹ್ಮ ಎಂದರೆ ಅದು ಪುರಾಣದ ಬ್ರಹ್ಮನಲ್ಲ.ಅವೆಲ್ಲ ರಸಸಿದ್ಧರು ಕಂಡುಕೊಂಡಿದ್ದ ಮೂಲಿಕೆಗಳ ಹೆಸರು.ಈ  ಮೂಲಿಕೆಗಲ  ಸಹಾಯದಿಂದ ರಸಸಿದ್ಧರು ಸುವರ್ಣ ರಸ ವಿದ್ಯೆಯನ್ನು ತಿಳಿದಿದ್ದರು. ಈಗ ಈ ಮೂಲಿಕೆಗಳ ಹೆಸರು ಗೊತ್ತಿಲ್ಲ. ಮಾಹಿತಿಗಳೆಲ್ಲ ಧಾಳಿಗಳಿಂದ ನಾಶವಾಗಿವೆ. ಒಂದು ತಾಮ್ರಶಾಸನದ ಉಲ್ಲೇಖದಂತೆ ವಿಜಯನಗರದ ಅರಸ ದೇವರಾಯ ಆಲಂಪುರವನ್ನು ರಕ್ಷಣೆ ಮಾಡುವುದಾಗಿ ವಚನ ಕೂಟ್ಟ ಮಾಹಿತಿ ಮಾತ್ರ ಇದೆ. ಇಷ್ಟೆಲ್ಲ ಮಾಹಿತಿ ಕೊಟ್ಟ ರಂಗನಾಥ ರಿಗೆ ಧನ್ಯವಾದ ಅರ್ಪಿಸಿ ದೇಗುಲಗಳನ್ನೆಲ್ಲ ಮತ್ತೊಮ್ಮೆ ಸುತ್ತಿ ವಾಪಸ್ ಹೊರಟೆವು. ಅದಕ್ಕೆ ಮುಂಚೆ ಅಲ್ಲಿಯ ಅನ್ನ ಸತ್ರದಲ್ಲಿ ಉಚಿತ ಊಟ ಸಹ ಮಾಡಿದೆವು. ಸೌಕರ್ಯಗಳು ತೀರ ಕಡಿಮೆ. ಪ್ರವಾಸಿಗಳು ಎಲ್ಲದಕ್ಕು ಅಂದರೆ ನೀರು ,ಊಟ ಸಿದ್ದರಾಗಿ ಹೋಗಬೇಕು. ಕರ್ನೂಲಿಗೆ ೨೫ ಕಿ ಮೀ ದೂರ ಇರುವುದರೀಂದ ಅನುಕೂಲ.
ತುಂಗಭದ್ರೆ ಇಲ್ಲಿ ಉತ್ತರಾಭಿಮುಖ ವಾಗಿ ಹರಿಯುವುದು ಒಂದು ವಿಶೇಷ.(ಭಾರತದಲ್ಲಿ ಇದೊಂದೆ ಉದಾಹರಣೆ)
ಇನ್ನು ರಾಯಚೂರು. ಇತಿಹಾಸದಲ್ಲಿ ರಾಯಚೂರಿನ ಕೋಟೆಗಾಗಿ ನಡೆದಷ್ಟು ಯುದ್ಧಗಳು ಬೇರೆಲ್ಲು ನಡೆದಿಲ್ಲ. ಕಾಕತೀಯ ಪ್ರತಾಪರುದ್ರನ (೧೩೩೬) ಕಾಲದಿಂದ ಆಂಗ್ಲರ ಕಾಲದವರೆಗು ಈ ಕೋಟೆಗಾಗಿ ಹೋರಾಟ ನಡೆದಿದೆ. ತಾಳಿಕೋಟೆಯಲ್ಲಿ ವಿಜಯನಗರ ಪತನವಾದ ಮೇಲೆ ಇಲ್ಲಿ ಬಹಮನಿಯವರದ್ದೆ ಕಾರುಬಾರು.
ಕೋಟೆ ಸಂಪೂರ್ಣ ಪಾಳು ಬಿದ್ದಿದೆ. ಒಳಗೆಲ್ಲ ಅತಿಕ್ರಮಣ ನಡೆದು ಹೋಗಿದೆ.ಎಲ್ಲೆಲ್ಲು ಕಸದ ಕುಪ್ಪೆಗಳು,ಚರಂಡಿಗಳು. ನಾಲ್ಕೈದು ಗುಡ್ಡಗಳಿಂದ ಸುತ್ತುವರೆದ ಕೆರೆ. ಎಲ್ಲ ಗುಡ್ಡಗಳನ್ನು ಸೇರಿಸಿ ಹೆಣೆದ ಕೋಟೆ. ಮೇಲೆ ಹತ್ತಲು ಎರಡು ದಾರಿಗಳು ಆದರೆ ಸರಿಯಾಗಿ ಮೆಟ್ಟಲುಗಳಿಲ್ಲ. ಹೇಗೊ ಸಾವರಿಸಿಕೊಂಡು ಮೇಲೇರಿದೆವು. ಕುರುಹಾಗಿ ಇದ್ದವೆಂದರೆ ಯಾವಾಗ ಬೀಳುತ್ತವೊ ಎಂದು ನಿಂತಿರುವ ಎರಡು ಕಟ್ಟಡಗಳು, ಒಂದು ಫ಼ಿರಂಗಿ. ಕೋಟೆಯಿಂದಾಚೆಗೆ ಬೆಳೆದ ಊರು. ಕೋಟೆಯೊಳಗೆಲ್ಲ ಸ್ಮಶಾನಗಳು. ಎಲ್ಲಿ ನೋಡಿದರು ಮಕ್ಬರಗಳು. ವಿಜಯನಗರದ ಅರಸರು ಈ ಕೋಟೆಯನ್ನು ಆಳಿದ್ದಕ್ಕೆ ಕುರುಹುಗಳೆ ಇಲ್ಲ. ನವರಂಗ್ ದರ್ವಾಜ ಎಂದು ಕರೆಯಲ್ಪಡುವುದೊಂದೆ ಅವರ ಕುರುಹು.ಇನ್ನು ಭದ್ರವಾಗಿದೆ. ವಿಶಾಲ ಪ್ರಾಂಗಣ, ಮೇಲೆಲ್ಲ ರಾಮಾಯಣ ದ ಕಥೆ ಹೇಳುವ ಉಬ್ಬು ಶಿಲ್ಪಗಳು. ಎ ಎಸ್ ಐ ನವರ ನಿರ್ಲಕ್ಶ್ಯಕ್ಕೆ ಸಾಕ್ಷಿ ಎನ್ನುವಂತೆ ಪಾರಿವಾಳಗಳ ಹಿಕ್ಕೆಯಿಂದ ಸ್ನಾನ ಮಾಡಿದ ಶಿಲ್ಪಗಳ ಸಾಲು. ಪ್ರಾಂಗಣದ ಮೇಲೆ ಬಲೆ. ನಮ್ಮ ಇತಿಹಾಸ ಪ್ರಜ್ನೆ ಗೆ ಸಾಕ್ಷಿಯಂತೆ, ಪಕ್ಕದ ಶಾಲೆಯ ಮಕ್ಕಳು ಕಲ್ಲು ಹೊಡಿಯುತ್ತಾರೆ ಅಂತ ಹಾಕಿದ್ದಾರೆ.
ರಾಯಚೂರು ಏಶ್ಯಾ ದಲ್ಲೆ ಎರಡನೆ ಅತಿ ದೊಡ್ಡ ಕೃಷಿ ಮಾರುಕಟ್ಟೆ ಹೊಂದಿದೆ. ಆದರೆ ಊರು ಇನ್ನು ನಾಗರಿಕ ವಾಗಿ ಬಹಳ ಹಿಂದಿದೆ. ರಸ್ತೆಗಳು,ಚರಂಡಿಗಳು ಸರಿಯಿಲ್ಲ. ನಾಗರಿಕ ಪ್ರಜ್ನೆ ಕಡಿಮೆ,  
ಜೋಗುಲಾಂಬ  ಗುಡಿಯ ಮುಂದೆ.
ಬಾಲಬ್ರಹ್ಮ ಗುಡಿ

ವೀರ ಬ್ರಹ್ಮ ಗುಡಿ

ಅರ್ಕ ಬ್ರಹ್ಮ

ರಸ ಸಿದ್ಧ ಬಹುಮುಖ

ಚಾಲುಕ್ಯರ ಕಾಲದ ಕೋಟೆಯ ಪಶ್ಚಿಮ ದ್ವಾರ, ಶ್ರೀ ಶೈಲಕ್ಕೆ ಹೋಗುವವರು ಇಲ್ಲಿ ಸಂಕಲ್ಪ ಮಾಡ ಬೇಕು. 

ತುಂಗಭದ್ರೆಯ ತಟದ ಮೇಲೆ, ದೇಗುಲಗಳ vihaMgamanOTa.


ರಾಯಚೂರಿನ ಕೋಟೆಯ ಮೇಲೆ, ಫಿರಂಗಿಯ ಜೊತೆ, ಹಿಂದೆ ಅಳಿದುಳಿದ ಕಟ್ಟಡ

ನವರಂಗ  ದರ್ವಾಜಾ.


ರಾಯಚೂರಿನ ಕೋಟೆಯ ಮೇlinದ   ಕಾಣುವ ಕೆರೆ    
ಆದರು ನಮ್ಮ ಸಮ್ಮೇಳನ ಭರ್ಜರಿಯಾಗಿ ನಡೆಸಿದರು. ನವೋದಯ ವೈದ್ಯಕೀಯ ವಿದ್ಯಾಲಯದ ದವರಿಗೆ ಶುಭಾಷಯಗಳು.
 

Saturday, March 20, 2010

gadagina suttamutta.

ಎರಡು ವರ್ಷಗಳ ಯೋಜನೆ ಕಳೆದ ಶನಿವಾರ ಪೂರ್ಣವಾಯಿತು.ಅಂತು ಹುಬ್ಬಳ್ಳಿ ಯ ಭ್ಹೇಟಿಯಿನ್ದ ಗದಗಿಗು ಹೋಗುವ ಸೌಭಾಗ್ಯ ಸಿಕ್ಕಿತು. ಹುಭ್ಭಳ್ಳಿಯ ಕೆ ಎಮ್ ಸಿ ಯ ಚರ್ಮರೋಗ ವಿಭಾಗದಲ್ಲಿ ಈ ಹಿಂದೆ ಅಲ್ಲಿ ಕೆಲಸ ಮಾಡಿದ ಮಾಸ್ತರುಗಳೀಗೆ ಶಾಲು ಹೊದೆಸುವ ಕಾರ್ಯಕ್ರಮ್ ರೂಪಿಸಿದ್ದರು ಅಲ್ಲಿಅ ವೈದ್ಯರಾದ ಡಾ ತೋಫಖಾನೆಯವರು. ಅವರ ಸಹೋದ್ಯೋಗಿ ಡಾ ರವಿ ಯ ಆಹ್ವಾನ ದಂತೆ ನಾನು ಷ್ರೀಮತಿಯವರ ಜೊತೆ ಬಿಜಾಪುರ್ ಎಕ್ಸ್ ಪ್ರೆಸ್ ನಲ್ಲಿ ಶನಿವಾರ ಬೆಳಗ್ಗೆ  ೫ ಗಂಟೆಗೆ  ಹುಬ್ಬಳ್ಳಿ ತಲುಪಿದೆವು. ಅಲ್ಲಿ ಸ್ವಲ್ಪ ವಿಶ್ರಾಂತಿಯ ನಂತರ  ಸ್ವಾತಿ ಯಲ್ಲಿ ಉಪಾಹಾರ ರವಿ ಜೊತೆ. ಆಮೇಲೆ ರವಿ ಕಾರಿನಲ್ಲಿ ಡ್ರೈವರ್  ಶಿವಾನಂದ್ ನಮ್ಮನ್ನ ಗದಗಿನತ್ತ ಕರೆದೊಯ್ದ. ದಾರಿಯಲ್ಲಿ ಪರಿಚಿತ ಹೆಸರುಗಳ ಊರುಗಳು. ಅಣ್ಣಿಗೆರಿ, ಹುಲಕೋಟಿ,ಕೋಳೀವಾಡ ಹಳ್ಳಿಕೇರಿ. ಶಿವನಂದ  ನಮ್ಮನ್ನು ಮೊದಲು ಕರೆದೊಯ್ದಿದ್ದದ್ದು ಅಣ್ಣಿಗೆರಿಗೆ. ಅಲ್ಲಿ ಚಾಲುಕ್ಯರ ಕಾಲದ ಅಮೃತೇಶ್ವರ ದೇವಾಲಯ. ನಮ್ಮ ಪಟ್ಟಿಯಲ್ಲಿರಲಿಲ್ಲ ಮೊದಲು. ನಂತರ ಅನಿಸಿದ್ದು ನಾವು ಹೋಗದಿದ್ದರೆ ನಷ್ಟ ನಮ್ಗೆ ಎಂಬುದು. ಒಳಂಗಣ ಸ್ವಚ್ಛ ಆದರೆ ಊರು ಕಷ್ಟ ಕಷ್ಟ. ೨೦ ಸಾವಿರ ಜನಸಂಖ್ಯೆ ಸ್ಥಿತಿ ಅಲ್ಲಿನ ಆಡಳಿತಕ್ಕೆ ಮೂಕ ಸಾಕ್ಷಿ. ಚಾಲುಕ್ಯರ  ಕಾಲದಲ್ಲೆ ಇದೆಯೇನೋ ಅನಿಸಿತು. 


ಅಲ್ಲಿಂದ ಗದಗು.ಡಾ ಇನಾಮ್ದಾರ್ ಅಣ್ಣ ನಮಗಾಗಿ ವಿಶ್ವ ಹೋಟೆಲ್ ಬಳಿ ಇದ್ದರು. ಅವರೊಂದಿಗೆ ಗದಗಿನ ತ್ರಿಕೂಟೇಶ್ವರ, ಮತ್ತೆ ವೀರನಾರಾಯಣ ನಿಗೆ ಭೇಟಿ.  ನಂತರ್ ಗದಗಿನಿಂದ ದಂಬಳ ೨೪ ಕಿ ಮೀ ಅಲ್ಲಿ ವಿನೂತನ ಶೈಲಿಯ ೨೪ ಮುಖಗಳ ದೊಡ್ಡ ಬಸಪ್ಪ ದೇವಾಲಯ ಕಲ್ಯಾಣದ ಚಾಲುಕ್ಯರ ಕೊಡುಗೆ. ಪರಿಸರ ಚನ್ನಾಗಿದೆ. ಹುಲ್ಲು ಹಾಸು ಸುತ್ತಲು ಕೊಳಕು ಇಲ್ಲ. ಆದರೆ ಗದಗಿಗೆ ಅಷ್ಟು ಹತ್ತಿರ ಇದ್ದರು ಪ್ರಚಾರ ಸಾಲದು. ಅಲ್ಲಿಂದ ಸ್ವಲ್ಪ ಕಚ್ಚ  ರಸ್ತೆಯಲ್ಲಿ ಕೊಪ್ಪಳ ಜಿಲ್ಲೆಯ ಇಟಗಿಗೆ. ದೇವಾಲಯಗಳ ಚಕ್ರವರ್ತಿ ಎಂದೆ ಚಾಲುಕ್ಯರ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಮಹದೇವ ದೇವಾಲಯ ದರ್ಶನ.೧೨ ಗಂಟೆ  ಉರಿ ಬಿಸಿಲು ಆದರೆ ನಮಗಾಗಿ ಅಂದು ಮೋಡ ಕವಿದ ವಾತಾವರಣ. ಪುನರ್ನಿಮಾಣ ನಡೆಯುತ್ತಿತ್ತು.ಮುಖಮಂಡಪ ದ ತಂಪಿನಲ್ಲಿ ಊರಿನ ಯಾವುದೋ ವ್ಯಾಜ್ಯ ತೀರ್ಮಾನ ವಾಗುತ್ತಿತ್ತು. ಪಕ್ಕದಾಲೇ ದೊಡ್ಡದಾದ ಹೊಸದಾಗಿ ಪುನರ್ನಿಮಾಣ ಮಾಡಿದ ಕಲ್ಯಾಣಿ. ಇನ್ನೊಂದೆರಡು ವರ್ಷಗಳಲ್ಲಿ ಅದ್ಭುತ ಪ್ರವಾಸಿ ತಾಣ ಸ್ಪಷ್ಟ. 
ಅಲ್ಲಿಂದ ಕೇವಲ ೭ ಕಿ ಮೀ ದೂರದ ಕುಕ್ಕನೂರಿಗೆ. ಅಲ್ಲಿ ೯-೧೦ ನೆ ಶತಮಾನದ, ಅಮೋಘವರ್ಷನ ಕಾಲದಲ್ಲಿ ನಿರ್ಮಾಣವಾದ ನವಲಿಂಗ ದೇವಾಲಯ ನಮ್ಮವರ ಇತಿಹಾಸ ಪ್ರಜ್ನೆ ಗೆ ಸಾಕ್ಷಿ ಯಾಗಿ ನಿಂತಿದೆ. ಹಾಗೆ ಬಿಟ್ಟರೆ ಕೆಲವೆ ವ‍ರ್ಷಗಳಲ್ಲಿ ನಾಶ ಖಂಡಿತ.
ಅಲ್ಲಿಂದ ಗದಗಿಗೆ ಹಿಂದಕ್ಕೆ. ದಾರಿಯಲ್ಲಿ ಪ್ರಸಿದ್ದ ಲಕ್ಕುಂಡಿ ದರ್ಶನ. ದೇಗುಲಗಳ ತವರು ಲಕ್ಕುಂಡಿ. ೧೦೧ ಇದ್ದವು ಈಗ ಬೆರಳೆಣಿಕೆಯಷ್ಟು. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಬ್ರಹ್ಮ ಜಿನಾಲಯ,ಮುಸುಕಿನ ಬಾವಿ. ಲಕ್ಕುಂಡಿ ದಾನ ಚಿಂತಾಮಣೀ ಅತ್ತಿಮಬ್ಬೆಯ ತವರು.
ನಂತರ ಗದಗು. ಅಲ್ಲಿ ಇನಾಮದಾರ ಅವರ ಮನೆಯಲ್ಲಿ ವಿಶ್ರಾಂತಿ, ಊಟ .ಔತಣ  ಮತ್ತೆ ಶ್ರೀಮತಿಗೆ ಮಗಳೆಂದು ಬಹುಮಾನ. ಸಾರ್ಥಕ ಪ್ರಯಾಣ.
ಮತ್ತೆ ಹುಬ್ಬಳ್ಳಿಗೆ ಪಯಣ. ದಾರಿಯಲ್ಲಿ ಕೋಳಿವಾಡ ಕ್ಕೆ ಭೇಟಿ ಕೃಪೆ ನಮ್ಮ ಡ್ರೈವರ್ ಶಿವಾನಂದ. ಅಲ್ಲಿಯೆ ಓದಿದ್ದಂತೆ. ಸೋದರಳೀಯನಿಗೆ ಫೋನ್ ಮಾಡಿ ನಮ್ಮ ಭೇಟಿ ನಿರ್ಣಯ ಮಾಡಿದ. ಕವಿ ಕುಮಾರವ್ಯಾಸನ ೪೦ನೆ ತಲೆ ತ್ರ್ಯಂಬಕೇಶ್ವರ್ ಪಾಟಿಲರ ಭೇಟಿ. ಕವಿಯ ಮೂಲ ಪ್ರತಿ ತಾಳೆ ಗರಿಗಳ ದರ್ಶನ. ಸೌಭಾಗ್ಯ ನಮ್ಮದು.
ವಾಪಸ್ ಹುಬ್ಬಳ್ಳಿಗೆ ರಾತ್ರಿ ೮ ಗಂಟೆಗೆ.ರಾತ್ರಿ ರವಿ ಮತ್ತೆ ಬೇಲೂರ್ ಜೊತೆ ಊಟ ಸ್ವಾತಿಯಲ್ಲಿ.

ಮಾರನೆ ದಿನ ಸನ್ಮಾನ ಕಾರ್ಯಕ್ರಮ ಮತ್ತು ಮೊಡವೆಗಳ ಮೇಲೆ ಸೈಂಟಿಫಿಕ್ ಕಾರ್ಯಕ್ರಮ ಹೋಟಲ್ ಕ್ಲಾರ್ಕ್ಸ್ ಇನ್ ನಲ್ಲಿ. ಚಿಕ್ಕ, ಚೊಕ್ಕ ಹೋಟಲ್.

ನನ್ನ ಹಳೆಯ ಕಾಲೇಜ್ ಕೆ ಎಮ್ ಸಿ ಗೆ ಭೇಟಿ ಕೊಟ್ಟು ರಾತ್ರಿ ಚೆನ್ನಮ್ಮ ಎಕ್ಸ್ ಪ್ರೆಸ್ ನಲ್ಲಿ ವಾಪಸ್.


Sunday, March 7, 2010

nuggehaLLige bhETi

ಬಹಳ ದಿನಗಳ ನಂತರ ಬಹುದಿನದ ಆಸೆ ಈಡೇರಿತು. ನುಗ್ಗೆಹಳ್ಳಿಯ ಹತ್ತಿರ ಎಷ್ಟೋ ಬಾರಿ ಹೋಗಿದ್ದರು ಅಲ್ಲಿ ಹೋಗಲಾಗಿರಲಿಲ್ಲ. ಎರಡು ಪುರಾತನ ದೇವಾಲಯಗಳು ಒಂದು ಶಿವನಿಗೆ ಇನ್ನೊಂದು ವಿಷ್ಣುವಿಗೆ. ಸದಾಶಿವ ಸ್ವಾಮಿ ಯದು ಸ್ವಲ್ಪ ಹೊಸದು ಲಕ್ಷ್ಮೀನರಸಿಂಹ ಸ್ವಾಮಿ ಯದು ಕೆಲವೇ ವರ್ಷ ಹಳೆಯದು. ಹೊಯ್ಸಳರ ಶಿಲ್ಪಕಲೆ ಎಷ್ಟು ನೋಡಿದರು ಸಾಲದು.ಹಾಸನ ಜಿಲ್ಲೆಯ ಸುಮಾರು ೩೦ ರಿಂದ ೪೦ ದೇವಾಲಯಗಳನ್ನು ನೋಡಿದ್ದೇನೆ. ಎಲ್ಲ ಕಡೆ ಒಂದೇ ತೆರನಾದ ರಚನೆಯಾದರೂ ಪ್ರತಿಯೊಂದು ಭಿನ್ನ. ಏನೋ ಹೊಸದು. ಮತ್ತೆ ಮತ್ತೆ ನೋಡಬೇಕು ಅನ್ನಿಸದೆ ಇರದು.ಈ ಶಿಲ್ಪಿ ಕಲೆಯ ರಕ್ಷಣೆ ಸಾಲದು. ಆಗಾಗ್ಗೆ ರಿಪೇರಿಯ ಅವಶ್ಯಕತೆ ಇದೆ. ದೇವಾಲಯಗಳ ಆದಾಯ ಇದಕ್ಕೇಕೆ ಖರ್ಚು ಮಾಡಬಾರದು. ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಸ್ಥಳ ನುಗ್ಗೆ ಹಳ್ಳಿ. ಹತ್ತಿರದಲ್ಲೇ ಬಾಗೂರು ಇದೆ.ಆದರೇ ಅಲ್ಲಿರುವ ದೇವಾಲಯ ಪುರಾತನವಾದರು ಕಲಾ ಪ್ರೌಢಿಮೆ ಏನಿಲ್ಲ. ಒಮ್ಮೆ ನೋಡಿ ಬನ್ನಿ.