Monday, April 18, 2011

ಬೆಳವಾಡಿ ಮತ್ತು ಜಾವಗಲ್ ದೇಗುಲಗಳು

ಭಾನುವಾರ, ಏಪ್ರಿಲ್ ೧೭ ರಂದು ಹುಟ್ಟಿದೂರಿಗೆ ಭೇಟಿ ಮಾಮೂಲಿನಂತೆ. ದಿನದ ಘಟನೆಗಳು ಮನಸ್ಸನ್ನು ಕಲಕಿದ್ದವು. ದಾಸವರೇಣ್ಯ ಪುರಂದರ ದಾಸರ ಪದ ನೆನಪಿಗೆ ಬರುತ್ತಿತ್ತು. ಮುನ್ನ ಶತ ಕೋಟಿ ರಾಯರುಗಳಾಳಿದ ಭೂಮಿಯನು ತನದೆಂದು--. ಮಹಭಾರತ ಯುದ್ಧ ಏಕೆ ನಡೆಯಿತೆಂದು ಪದೇ ಪದೇ ಮನಸ್ಸು ಕೇಳುತ್ತಿತ್ತು,ಹೇಳುತ್ತಿತ್ತು. ದುರ್ಯೋಧನ ಕೆಟ್ಟವನೇನಲ್ಲ ವೆಂದೆನಿಸುತ್ತಿತ್ತು. ಹಸ್ತಿನಾಪುರದ ರಾಜ ತಾನೆ ಆಗಬೇಕೆಂದಿದ್ದರೂ ಅನುಜರನ್ನು ಅಸಭ್ಯವಾಗಿ ನಡೆಸಿ ಕೊಂಡವನೇನಲ್ಲ. ಇಂದಿನ ದುರ್ಯೋಧನರು ಹಾಗೇನಲ್ಲ????.

ಮಾನಸಿಕ ತುಮುಲಕ್ಕೆ ಒಳಗಾಗಿದ್ದ ನನಗೆ ಶಾಂತಿ ಬೇಕಿತ್ತು. ಅದೇನೊ ಸಂದರ್ಭ ಒದಗಿ ಬಂತು. ನಮ್ಮೂರಿನಿಂದ ಕೇವಲ ೫೦-೬೦ ಕಿ ಮೀ ದೂರದಲ್ಲಿದ್ದ ಹೊಯ್ಸಳರ ಶಿಲ್ಪಕಲೆಗೆ ಸಾಕ್ಷಿಯಾಗಿದ್ದ ಎರಡು ದೇವಾಲಯಗಳ ದರ್ಶನ ಲಭಿಸಿತು.

ಕ್ರಿಕೆಟರ್ ಶ್ರೀನಾಥ ನ ಜಾವಗಲ್ಲಿನ ಲಕ್ಷ್ಮಿನರಸಿಂಹ ಮತ್ತು ಬೆಳವಾಡಿಯ ವೀರನಾರಾಯಣ. ಜಾವಗಲ್ಲಿನದು ಚಿಕ್ಕದು,ತ್ರಿಕೂಟಾಚಲ. ಬೆಳವಾಡಿಯದೂ ತ್ರಿಕೂಟಾಚಲ. ಆದರೆ ಗಾತ್ರದಲ್ಲಿ ಬಹಳ ದೊಡ್ಡದು. ಜಾವಗಲ್ಲಿನ ದೇವಾಲಯ ಶಿಥಿಲಾವಸ್ಥೆಯಲ್ಲಿದೆ,ಆದರೆ ಈಗ ನವೀಕರಣ ನಡೆಯುತ್ತಿದೆ.

ದೇವಾಲಯದ ಹೊರ ಗೋಡೆಗಳೆಲ್ಲ ಕೆತ್ತನೆಗಳಿಂದ ಅಲಂಕೃತ. ಒಳಗೆ ತ್ರಿಕೂಟ ಗರ್ಭ ಗೃಹಗಳ ಮಧ್ಯೆ ಚಿಕ್ಕಮಂಟಪ,ಚೊಕ್ಕ ಸುಂದರ ದೇವಾಲಯ.

ಬೆಳವಾಡಿ ಜಾವಗಲ್ಲಿನಿಂದ ೭ ಕಿ ಮೀ ,ಬೇಲೂರು ಚಿಕ್ಕಮಗಳೂರು ರಸ್ತೆಯಲ್ಲಿದೆ. ಸುತ್ತ ಸುಂದರ ಹುಲ್ಲು ಹಾಸು ಮಧ್ಯೆ ಸುಸ್ಥಿತಿಯಲ್ಲಿರುವ ದೇವಾಲಯ.ಬೇಲೂರು ಹಳೇಬೀಡು ದೇವಾಲಯಗಳಿಗಿಂತ ಸ್ವಲ್ಪ ಭಿನ್ನವಾದರು ಅಷ್ಟೇ ದೊಡ್ಡದು. ಮೂರು ಗರ್ಭಗೃಹಗಳು,ಶುಕನಾಸ,ಮಂಟಪ ಅಲ್ಲದೆ ದೊಡ್ಡದಾದ ದ್ವಾರಮಂಟಪ.

ಗರ್ಭಗೃಹಗಳಿಗೆ ಹೊರ ಮೈಮೇಲೆ ಹೊಯ್ಸಳ ಶಿಲ್ಪಿಗಳ ಕೈ ಚಳಕದಿಂದ ಮೂಡಿ ಬಂದ ಶಿಲ್ಪಗಳು.ಅದು ಬಿಟ್ಟರೆ ಬೇರೆಲ್ಲೂ ಶಿಲ್ಪಗಳಿಲ್ಲ ದ್ವಾರದಲ್ಲಿ ಎರದು ಬೃಹತ್ ಆನೆಗಳು.ಆದರೆ ಎಲ್ಲು ಹೊಯ್ಸಳ ಲಾಂಛನ ಕಾಣಲಿಲ್ಲ.

ತ್ರಿಕೂಟಾಚಲದ ಗರ್ಭಗೃಹಗಳಲ್ಲಿರುವ ಪ್ರತಿಮೆಗಳು ವೀರನಾರಾಯಣ , (ಇದೇ ದೇವಾಲಯದ ಹೆಸರು), ಯೋಗಾನರಸಿಂಹ ಮತ್ತು ಗೋಪಾಲಕೃಷ್ಣ. ಗೋಪಾಲ ಕೃಷ್ಣ ಮೂರ್ತಿ ವಾಸ್ತು ಶಿಲ್ಪದ ನಿಯಮಗಳಿಗೆ ಅನುಗುಣವಾಗಿ ನಿರ್ಮಿಸಿರುವ ಭಾರತದಲ್ಲೆ ಅತ್ಯಂತ ಸುಂದರ ಮೂರ್ತಿ ಎಂದು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯವರ ಅಂಬೋಣ.

ಶಾಸನಗಳಿಗಾಗಿ ಹುಡುಕಾಡಿದೆ.ಒಂದು ಹೊರಗಿನ ದ್ವಾರ ಮಂಟಪದಲ್ಲಿದೆ.ಓದಲು ಅಕ್ಷರಗಳು ಸ್ಫುಟವಾಗಿರಲಿಲ್ಲ. ಒಂದೆರಡು ಸಾಲು ಮಂಟಪದ ಮೇಲಿದೆ.

ಬೆಳವಾಡಿ,ಹಳೆಬೀಡಿನಿಂದ ಕೇವಲ ೧೦ ಕಿ ಮೀ ದೂರ,ಬೇಲೂರಿನಿಂದ ೧೩ ಕಿ ಮೀ ಮತ್ತು ಜಾವಗಲ್ಲಿನಿಂದ ೭ ಕಿ ಮೀ ದೂರದಲ್ಲಿದೆ. ಹಾಸನಕ್ಕೆ ೩೦ ಕಿ ಮೀ ಮತ್ತು ಅರಸಿಕೆರೆಯಿಂದ ೪೦ ಕಿ ಮೀ ದೂರದಲ್ಲಿದೆ.ಚಿಕ್ಕಮಗಳೂರು ಜಿಲ್ಲೆಗೆ ಸೇರಿದೆ. ನನ್ನ ಮಿತ್ರ ರಾದ ದಿ: ಕೃಷ್ಣ ಮೂರ್ತಿ ಎಮ್ ಎಲ್ ಸಿ ಯವರ ಊರು.ನೆನಪಿಗೆ ಬಂದರು.

ಈಗ ಪ್ರಾಚ್ಯ ವಸ್ತು ಇಲಾಖೆಯವರ ಆದೇಶದಿಂದ ದೇವಾಲಯದ ಸುತ್ತ ೧೦೦ ಮೀ ತೆರವು ಗೊಳಿಸಬೇಕೆನ್ದು ಆದೇಶ ಬಂದಿದೆ.ನೂರಾರು ವರ್ಷಗಳಿಂದ ಸುತ್ತ ಮುತ್ತ ವಾಸವಾಗಿದ್ದವರಿಗೆ ಕಂಟಕ ಪ್ರಾಯ.ಕಾದು ನೋಡಬೇಕು.

ಬಹಳಷ್ಟು ದೇವಾಲಯಗಳ ದುಸ್ಥಿತಿಗೆ ಸುತ್ತಲಿನ ಜನರೇ ಕಾರಣ.ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಜ್ನೆ ಇಲ್ಲದ ಜನರಿಂದ ಸಾಕಷ್ಟು ಪುರಾತನ ಸ್ಮಾರಕಗಳು ನಾಶವಾಗಿವೆ,ಆಗುತ್ತಿವೆ.

ಮಾನವ ಇತಿಹಾಸದಲ್ಲೇ ಅತ್ಯುನ್ನತ ಶಿಲ್ಪಕಲಾ ದೇಗುಲಗಳ ಸೃ ಷ್ಟಿಗೆ ಕಾರಣರಾದ ಹೊಯ್ಸಳರ ನಾಡಿನಲ್ಲಿರುವ ನಾವು ಇದರ ಬಗ್ಗೆ ಯೋಚಿಸಬೇಕು.

ಮರೆತದ್ದು - ಇತ್ತೀಚೆಗೆ ನಾನು ನೋಡಿದ ದಂಬಳದ (ಗದಗ) ಕಲ್ಯಾಣದ ಚಾಲುಕ್ಯರ ದೊಡ್ಡಬಸಪ್ಪ ದೇವಾಲಯವೊಂದೆ ಪರಿಸರ ಕಾಪಾಡುವಲ್ಲಿ ಮತ್ತು ಸುಸ್ಥಿತಿಯಲ್ಲಿ ಇರುವ ಇನ್ನೊಂದು ಉದಾಹರಣೆ.

















No comments: