Saturday, October 30, 2010

aalampura mattu raayachUru

ಅಂದು ಗುರುವಾರ.ಸಂಜೆ ಎಂಟು ಗಂಟೆಯ ಉದ್ಯಾನ್ ರೈಲಿನಲ್ಲಿ ನಿತೀಶನ ಜೊತೆ ಬಿ ೨ ಬೋಗಿಯಲ್ಲಿ ಕುಳಿತು ರಾಯಚೂರಿಗೆ ಹೊರಟೆ. ರೈಲು ಹೊರಡುವ ವೇಳೆಗೆ ೩ - ೪ ಜನ ಸಮ್ಮೇಳನಕ್ಕೆ ಹೊರಟಿದ್ದ ವೈದ್ಯರು ಸೇರಿಕೊಂಡರು. ನಾವೆಲ್ಲ ಹೊರಟಿದ್ದು ಕರ್ನಾಟಕ ರಾಜ್ಯ ಚರ್ಮ ವೈದ್ಯರ ಪ್ರಥಮ ಸಮ್ಮೇಳನ. ನಿತೀಶ ನನ್ನ ತಮ್ಮನ ಮಗ ನನಗೆ ಜೊತೆ ಅಷ್ಟೆ. ಒಂದು ದಿನ ಮುಂಚೆ ನಾನು ಹೊರಟಿದ್ದು ರಾಯಚೂರಿನಿಂದ ೧೦೦ ಕಿ ಮೀ ದೂರದಲ್ಲಿದ್ದ ಆಲಂಪುರ ಎಂಬ ಬಾದಾಮಿಯ ಚಲುಕ್ಯರ ಮೂಡಲ ಆಡಳಿತ ಕೇಂದ್ರ ನೋಡಲಿಕ್ಕೆ. ಪುಸ್ತಕ, ಅಂತರ್ಜಾಲ ಮತ್ತು ಕೇಳಿದ್ದ ಕಥೆ ಜಾಲಾಡಿ ಆಲಂಪುರದ ಮಾಹಿತಿ ಪಡೆದಿದ್ದೆ.ನಮ್ಮ ರೈಲು ಬೆಳಗಿನ ೬ ಗಂಟೆಗೆ ರಾಯಚೂರು ನಿಲ್ದಾಣ ತಲುಪಿತು. ಇಳಿದು ನಾನು ನಿತೀಶ ಬ್ಯಾಗ್ ಹಿಡಿದು ನಮಗಾಗಿ ಕಾದಿರಿಸಿದ್ದ ನೃಪತುಂಗ ಹೋಟೆಲ್ ಗೆ ಹೊರಟೆವು. ನಡೆದೆ ಹೋಗುವಷ್ಟು ದೂರದಲ್ಲಿದ್ದ ಅಲ್ಲಿಗೆ ಸುಮಾರು ೧೫ ನಿಮಿಷ ಬೇಕಾಯಿತು. ಮುಖ್ಯ ರಸ್ತೆ ದಾಂಬರು ಕಂಡು ಎಷ್ಟು ವರ್ಷ ಗೊತ್ತಿಲ್ಲ. ಎರ್ರ ಬಿರ್ರಿ ವಾಹನ ನಿಲುಗಡೆ, ಸಂಚಾರ ಅಲ್ಲಿ. ಆ ಬೆಳಗಿನಲ್ಲೆ. ಬರಿ ಧೂಳು. ನೃಪತುಂಗ ಅಷ್ಟೇನು ಅನುಕೂಲಕರ ಹೋಟೆಲ್ ಅಲ್ಲ. ಬಹಳ ಹಳೆಯ ಹೋಟೆಲ್ ಅಥವ ಅಷ್ಟು ಸೌಕರ್ಯ ಹೊಂದಿದ ಮೊದಲ ಹೋಟೆಲ್. ಆ ರಸ್ತೆಯಲ್ಲೆಲ್ಲ ಬರೀ ಹೋಟೆಲ್ಗಳೇ. ಕುಬೇರ ಸ್ವಲ್ಪ ಆಧುನಿಕ ಅನ್ನಿಸಿತು.
ಮುಂಜಾವಿನ ಸ್ನಾನ ಎಲ್ಲ ಮುಗಿಸಿ ಮೊದಲೆ ನಿರ್ಧರಿಸಿದ್ದ (ಡಾ. ಕಲ್ಲಪ್ಪನವರ ಕೃಪೆ) ಕಾರಿನಲ್ಲಿ ಆಲಂಪುರಕ್ಕೆ ಜ಼ಕೀರನ ಟ್ಯಾಕ್ಸಿಯಲ್ಲಿ ಹೊರಟೆವು. ಗೂಗಲ್ ನಲ್ಲಿ ನೋಡಿದ್ದ ನಕ್ಷೆಯಲ್ಲಿ ತೋರಿಸಿದಂತೆ ಗದ್ವಾಲ್ ಮೂಲಕ ಹೋಗುವ ರಸ್ತೆ ಹಿಡಿದೆವು.ಆಂಧ್ರ ಗಡಿ ಕೇವಲ ೧೫ ಕಿ ಮೀ ನಲ್ಲಿ. ಗದ್ವಾಲ್ ವರೆಗು ರಾಜ್ಯ ರಸ್ತೆ ಅಷ್ಟೇನು ಸರಿಯಿಲ್ಲ. ನಂತರ ಹೈದರಾಬಾದ್ -ಬೆಂಗಳೂರು ಹೆದ್ದಾರಿ. ಅದು ಹೆದ್ದಾರಿಯೋ ಏನೋ ಗೊತ್ತಾಗಲಿಲ್ಲ. ಎದುರಿನಿಂದ ಬರುವ ವಾಹನಗಳು, ಎತ್ತಿನಗಾಡಿಗಳು, ಅಡ್ಡ ದಿಡ್ಡಿ ರಸ್ತೆ ದಾಟುವ ಮೋಟಾರ್ ಬೈಸಿಕಲ್ ಸವಾರರು, ಸ್ವಲ್ಪ ಎಚ್ಚರ ತಪ್ಪಿದರೆ ಅಪಘಾತ ನಿಶ್ಚಿತ. ಬೀಚಂಪಲ್ಲಿ ಬಳಿ ತಿರುವು ಪಡೆದು ಸ್ವಲ್ಪ ದೂರ ಕ್ರಮಿಸಿ ಆಲಂಪುರಕ್ಕೆ ಎಡಕ್ಕೆ ತಿರುಗಿ ೧೫ ಕಿ ಮೀ ಕಚ್ಚಾ ರಸ್ತೆ ಯಲ್ಲಿ ಹೋಗಬೇಕು. ಅಲ್ಲಲ್ಲೆ ಕಿತ್ತು ಹೋದ ಎ ಎಸ್ ಐ ಫಲಕಗಳು. ಅಂತು ೧೧ ಗಂಟೆಗೆ ಆಲಂಪುರ ತಲುಪಿದೆವು. ನಮ್ಮ ಡ್ರೈವರ್ ಜ಼ಕೀರನಿಗೆ ದಾರಿ ಗೊತ್ತಿದ್ದರಿಂದ ಕಷ್ಟವಾಗಲಿಲ್ಲ. ಮೊದಲು ನಾವು ಕೇಳಿದ್ದು ಯಾರಾದರು ಗೈಡ್ ಗಳಿದ್ದಾರ ಅಂತ. ಯಾರು ಸಿಗಲಿಲ್ಲ. ನಿರಾಶೆಯಿಂದ ನಾವೆ ಮೊದಲು ಎಲ್ಲಕ್ಕಿಂತ ಹೊಸದಾಗಿದ್ದ ಜೋಗುಳಾಂಬ ದೇವಾಲಯಕ್ಕೆ ಹೊರಟೆವು.ಅರ್ಚನೆಗೆ ಚೀಟಿ ಕೊಂಡು ವಿಶಾಲ್ವಾದ ಪ್ರಾಂಗಣ ವನ್ನು ದಾಟಿ ದೇಗುಲ ಸೇರಿದೆವು. ಹಳೆಯ ದೇಗುಲ ಧಾಳಿಗೆ ಒಳಗಾಗಿ ಬಿದ್ದು ಹೋಗಿತ್ತು ಅದನ್ನು ೧೬ ನೆಯ ಶತಮಾನದಲ್ಲಿ ಮತ್ತೆ ಇತ್ತೀಚೆಗೆ ಪುನಃ ನಿರ್ಮಾಣ ಮಾಡಿದ್ದಾರೆ. ಜೋಗುಳಾಂಬ ೧೮ ಭಾರತದ ಶಕ್ತಿ ಪೀಠಗಳಲ್ಲಿ ಒಂದು. ಶಿವನ ಪತ್ನಿ ಸತಿ ಯಾಗ ಕುಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಶಿವ ಸತಿಯ ಶರೀರವನ್ನು ಹೊತ್ತು ತಿರುಗುತ್ತಿದ್ದಾಗ ಶರೀರದ ಭಾಗಗಳೆಲ್ಲ ಒಂದೊಂದಾಗಿ ಬೀಳತೊಡಗಿದುವು.ಆಕೆಯ ಗಲ್ಲದ ಭಾಗ ಬಿದ್ದ ಜಾಗ ಇದಾಗಿದ್ದುದರಿಂದ ಇದಕ್ಕೆ ಜೋಗುಳಾಂಬ ಎಂಬ ಹೆಸರು ಬಂತೆಂದು ಪುರಾಣದ ಕಥೆ. ಅದೇನೆ ಇರಲಿ ಚಿಕ್ಕ ಚೊಕ್ಕ ಸುಂದರ ದೇಗುಲ. ಪ್ರತಿನಿತ್ಯ ಬೆಳಗ್ಗೆ ೭ರಿಂದ ಸಂಜೆ ೭ ರವರಗೆ ಪೂಜೆ(೧ ರಿಂದ ೨ ರ ವರೆಗೆ ಬಿಡುವು). ನಂತರ ಅಲ್ಲಿಂದ ಹೊರಟು ಉಳಿದ ದೇವಾಲಯಗಳನ್ನು ನೋಡಲು ಹೊರಟೆವು.ಬಾಲ ಬ್ರಹ್ಮ ದೇವಾಲಯದಲ್ಲಿ ಪೂಜೆಯ ನಂತರ ಅಲ್ಲಿಯ ಅರ್ಚಕರ್ ಪರಿಚಯ ವಾಯಿತು.ಅವರು ಕನ್ನಡ ಮಾತಾಡುತ್ತಿದ್ದದ್ದರಿಂದ ಕೆಲವು ವಿಷಯ ತಿಳಿಯಿತು. ಗಣಪತಿ ಶರ್ಮ ಎಂಬುವರು ಆಲಂಪುರ ದ ದೇವಾಲಯಗಳ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ, ಮಾನ್ಯುಮೆಂಟ್ಸ್ ಆಫ಼್ ಆಲಂಪುರ. ಅವರ ಸಹಾಯಕರಾಗಿದ್ದ ರಂಗನಾಥ ಎಂಬುವರು ಜೋಗುಳಾಂಬ ದೇಗುಲದಲ್ಲಿ ನೌಕರ ರಾಗಿದ್ದಾರೆಂದು ತಿಳಿದು ಅವರನ್ನು ಹುಡುಕಿ ಕೊಂಡು ಹೊರಟೆವು.
ದೇಗುಲದಲ್ಲಿ ಅರ್ಚನೆಗೆ ಚೀಟಿ ಕೊಡುತ್ತಿದ್ದ ವ್ಯಕ್ತಿಯೆ ರಂಗನಾಥ ಎಂದು ಗೊತ್ತಾಗಿ ಅವರ ಸಹಕಾರ ಕೋರಿದೆ. ಅವರು ಪುರಾತತ್ವ ದಲ್ಲಿ ವಿದ್ಯಾಭ್ಯಾಸ ಮಾಡಿರುವುದು ತಿಳಿಯಿತು. ನಮ್ಮ ಆಸಕ್ತಿ ಕಂಡು ಅರ್ಧ ಗಂಟೆ ನಮ್ಮೊಡನೆ ಬಂದು ನವ ಬ್ರಹ್ಮ ದೇಗುಲಗಳ ಬಗ್ಗೆ ತಿಳಿಸಿದರು. ಅಲ್ಲಿಯ ರಾಜ ರಸಸಿದ್ಧರೊಡನೆ(ಆಲ್ಕೆಮಿಸ್ಟ್) ರಸ ಕುಂಭಕ್ಕಾಗಿ ಹೋರಾಡಿದ್ದು ರಸ ಸಿದ್ದ ಆತ್ಮಾರ್ಪಣೆ ಮಾಡಿ ಕೊಂಡಿದ್ದು ಅವನ ಹೆಂಡತಿ ಆಗ ಗರ್ಭಿಣಿಯಾಗಿದ್ದು ಅವಳಿಗೆ ಹುಟ್ಟಿದ ಮಗನನ್ನು ಅಲ್ಲಿಯವರು ರಂಡಿಪುತ್ರನೆಂದು ಹೀಯಾಳಿಸಿದ್ದು, ಆತ ಕಾಶಿಗೆ ಹೋಗಿ ವಿಶ್ವೆಶ್ವರನನ್ನೆ ತಾನು ಯಾರೆಂದು ಕೇಳಿದ್ದು, ವಿಶ್ವನಾಥ ಅವನಿಗೆ ತನ್ನ ಮಗನೆ ನೀನು ಎಂದು ಹೇಳಿದ್ದು ನಂತರ ಆಲಂಪುರಕ್ಕೆ ಹೋಗಿ ದೇಗುಲಗಳ ನಿರ್ಮಾಣ ಮಾಡಿದ್ದು ತಿಳಿಸಿದರು. ಇದು ಎಷ್ಟು ಸತ್ಯವೋ, ಎಷ್ಟು ಪೌರಾಣಿಕವೊ ಆದರೆ ದೇಗುಲಗಳಿರುವುದಂತು ನಿಜ. ನವ ಬ್ರಹ್ಮ ಆದರೆ ಇವು ಯಾವುವು ಬ್ರಹ್ಮನ ದೇಗುಲಗಳಲ್ಲ.ಎಲ್ಲವು ಈಶ್ವರನ ದೇವಾಲಯಗಳು. ಇಲ್ಲಿರುವುದೆಲ್ಲವು ಶಿವ ಲಿಂಗಗಳು. ಒಂದಲ್ಲ ಎರಡಲ್ಲ ನೂರಾರು.ಕಾಲು ಕಾಲಿಗೆ ಎಡತಾಕುವ ಲಿಂಗಗಳು. ಬ್ರಹ್ಮ ಒಂದು ಸುಳ್ಳು ಹೇಳಿ ಪ್ರಾಯಶ್ಚಿತ್ತ ಮಾಡಿ ಕೊಂಡದ್ದರಿಂದ ಇಲ್ಲಿ ಎಲ್ಲವು ಬ್ರಹ್ಮೇಶ್ವರ. ಬಾಲಬ್ರಹ್ಮ,ಅರ್ಕ ಬ್ರಹ್ಮ, ಪದ್ಮಬ್ರಹ್ಮ,ವಿಶ್ವಬ್ರಹ್ಮ,ಸ್ವರ್ಗಬ್ರಹ್ಮ,ಗರುಡಬ್ರಹ್ಮ,ವೀರಬ್ರಹ್ಮ,ಕುಮಾರಬ್ರಹ್ಮ ಮತ್ತು ತಾರಕ ಬ್ರಹ್ಮ. ಬಾಲಬ್ರಹ್ಮ ಒಂದೆ ಪೂಜೆಗೊಳ್ಳುತ್ತಿರುವ ದೇವಾಲಯ. ಇದನ್ನು ಈಶಾನಾಚಾರ್ಯ ಎಂಬುವನು ಚಳುಕ್ಯ ಚಕ್ರೇಶ್ವರ ವಿಜಯಾದಿತ್ಯ ನಿಗೋಸ್ಕರ ನಿರ್ಮಿಸಿದ.(ಶಾ ಶಕೆ ೬೩೬).
೨೦೦೯ ರ ಪ್ರವಾಹ ದಲ್ಲಿ ಇಲ್ಲಿಯ ಜೋಗುಳಾಂಬ ದೇವಾಲಯದ ಶಿಖರದ ವರೆಗು ನೀರು ಬಂದಿತ್ತು. ಎಲ್ಲ ದೇವಾಲಯಗಳು ಮುಳುಗಿ ಹೋಗಿದ್ದವು. ರಂಗನಾಥ ಹೇಳಿದಂತೆ ರಾತ್ರಿ ೭ ಗಂಟೆಗೆ ಕರ್ನೂಲಿನ ಬಳಿ ಇರುವ ಬ್ಯಾರೇಜ್ ಒಡೆದು ನೀರು ಏರಲಾರಂಭಿಸಿತು. ಆಲಂಪುರ ನಾಗರಿಕರೆಲ್ಲ ಒಂದೆರಡು ಗಂಟೆಗಳಲ್ಲಿ ಊರು ಖಾಲಿ ಮಾಡಿದರು. ಪೂರ್ಣ ಊರು ನೀರಿನಲ್ಲಿ ಮುಳುಗಿ ಹೋಯಿತು. ರಂಗನಾಥರ ಬಳಿಯಿದ್ದ ೮೦೦ ಆಲಂಪುರದ ಮಾಹಿತಿಯಿದ್ದ ಪುಸ್ತಕಗಳೆಲ್ಲ ನೀರು ಪಾಲಾಯಿತು.
ಇಲ್ಲಿ ಬ್ರಹ್ಮ ಎಂದರೆ ಅದು ಪುರಾಣದ ಬ್ರಹ್ಮನಲ್ಲ.ಅವೆಲ್ಲ ರಸಸಿದ್ಧರು ಕಂಡುಕೊಂಡಿದ್ದ ಮೂಲಿಕೆಗಳ ಹೆಸರು.ಈ  ಮೂಲಿಕೆಗಲ  ಸಹಾಯದಿಂದ ರಸಸಿದ್ಧರು ಸುವರ್ಣ ರಸ ವಿದ್ಯೆಯನ್ನು ತಿಳಿದಿದ್ದರು. ಈಗ ಈ ಮೂಲಿಕೆಗಳ ಹೆಸರು ಗೊತ್ತಿಲ್ಲ. ಮಾಹಿತಿಗಳೆಲ್ಲ ಧಾಳಿಗಳಿಂದ ನಾಶವಾಗಿವೆ. ಒಂದು ತಾಮ್ರಶಾಸನದ ಉಲ್ಲೇಖದಂತೆ ವಿಜಯನಗರದ ಅರಸ ದೇವರಾಯ ಆಲಂಪುರವನ್ನು ರಕ್ಷಣೆ ಮಾಡುವುದಾಗಿ ವಚನ ಕೂಟ್ಟ ಮಾಹಿತಿ ಮಾತ್ರ ಇದೆ. ಇಷ್ಟೆಲ್ಲ ಮಾಹಿತಿ ಕೊಟ್ಟ ರಂಗನಾಥ ರಿಗೆ ಧನ್ಯವಾದ ಅರ್ಪಿಸಿ ದೇಗುಲಗಳನ್ನೆಲ್ಲ ಮತ್ತೊಮ್ಮೆ ಸುತ್ತಿ ವಾಪಸ್ ಹೊರಟೆವು. ಅದಕ್ಕೆ ಮುಂಚೆ ಅಲ್ಲಿಯ ಅನ್ನ ಸತ್ರದಲ್ಲಿ ಉಚಿತ ಊಟ ಸಹ ಮಾಡಿದೆವು. ಸೌಕರ್ಯಗಳು ತೀರ ಕಡಿಮೆ. ಪ್ರವಾಸಿಗಳು ಎಲ್ಲದಕ್ಕು ಅಂದರೆ ನೀರು ,ಊಟ ಸಿದ್ದರಾಗಿ ಹೋಗಬೇಕು. ಕರ್ನೂಲಿಗೆ ೨೫ ಕಿ ಮೀ ದೂರ ಇರುವುದರೀಂದ ಅನುಕೂಲ.
ತುಂಗಭದ್ರೆ ಇಲ್ಲಿ ಉತ್ತರಾಭಿಮುಖ ವಾಗಿ ಹರಿಯುವುದು ಒಂದು ವಿಶೇಷ.(ಭಾರತದಲ್ಲಿ ಇದೊಂದೆ ಉದಾಹರಣೆ)
ಇನ್ನು ರಾಯಚೂರು. ಇತಿಹಾಸದಲ್ಲಿ ರಾಯಚೂರಿನ ಕೋಟೆಗಾಗಿ ನಡೆದಷ್ಟು ಯುದ್ಧಗಳು ಬೇರೆಲ್ಲು ನಡೆದಿಲ್ಲ. ಕಾಕತೀಯ ಪ್ರತಾಪರುದ್ರನ (೧೩೩೬) ಕಾಲದಿಂದ ಆಂಗ್ಲರ ಕಾಲದವರೆಗು ಈ ಕೋಟೆಗಾಗಿ ಹೋರಾಟ ನಡೆದಿದೆ. ತಾಳಿಕೋಟೆಯಲ್ಲಿ ವಿಜಯನಗರ ಪತನವಾದ ಮೇಲೆ ಇಲ್ಲಿ ಬಹಮನಿಯವರದ್ದೆ ಕಾರುಬಾರು.
ಕೋಟೆ ಸಂಪೂರ್ಣ ಪಾಳು ಬಿದ್ದಿದೆ. ಒಳಗೆಲ್ಲ ಅತಿಕ್ರಮಣ ನಡೆದು ಹೋಗಿದೆ.ಎಲ್ಲೆಲ್ಲು ಕಸದ ಕುಪ್ಪೆಗಳು,ಚರಂಡಿಗಳು. ನಾಲ್ಕೈದು ಗುಡ್ಡಗಳಿಂದ ಸುತ್ತುವರೆದ ಕೆರೆ. ಎಲ್ಲ ಗುಡ್ಡಗಳನ್ನು ಸೇರಿಸಿ ಹೆಣೆದ ಕೋಟೆ. ಮೇಲೆ ಹತ್ತಲು ಎರಡು ದಾರಿಗಳು ಆದರೆ ಸರಿಯಾಗಿ ಮೆಟ್ಟಲುಗಳಿಲ್ಲ. ಹೇಗೊ ಸಾವರಿಸಿಕೊಂಡು ಮೇಲೇರಿದೆವು. ಕುರುಹಾಗಿ ಇದ್ದವೆಂದರೆ ಯಾವಾಗ ಬೀಳುತ್ತವೊ ಎಂದು ನಿಂತಿರುವ ಎರಡು ಕಟ್ಟಡಗಳು, ಒಂದು ಫ಼ಿರಂಗಿ. ಕೋಟೆಯಿಂದಾಚೆಗೆ ಬೆಳೆದ ಊರು. ಕೋಟೆಯೊಳಗೆಲ್ಲ ಸ್ಮಶಾನಗಳು. ಎಲ್ಲಿ ನೋಡಿದರು ಮಕ್ಬರಗಳು. ವಿಜಯನಗರದ ಅರಸರು ಈ ಕೋಟೆಯನ್ನು ಆಳಿದ್ದಕ್ಕೆ ಕುರುಹುಗಳೆ ಇಲ್ಲ. ನವರಂಗ್ ದರ್ವಾಜ ಎಂದು ಕರೆಯಲ್ಪಡುವುದೊಂದೆ ಅವರ ಕುರುಹು.ಇನ್ನು ಭದ್ರವಾಗಿದೆ. ವಿಶಾಲ ಪ್ರಾಂಗಣ, ಮೇಲೆಲ್ಲ ರಾಮಾಯಣ ದ ಕಥೆ ಹೇಳುವ ಉಬ್ಬು ಶಿಲ್ಪಗಳು. ಎ ಎಸ್ ಐ ನವರ ನಿರ್ಲಕ್ಶ್ಯಕ್ಕೆ ಸಾಕ್ಷಿ ಎನ್ನುವಂತೆ ಪಾರಿವಾಳಗಳ ಹಿಕ್ಕೆಯಿಂದ ಸ್ನಾನ ಮಾಡಿದ ಶಿಲ್ಪಗಳ ಸಾಲು. ಪ್ರಾಂಗಣದ ಮೇಲೆ ಬಲೆ. ನಮ್ಮ ಇತಿಹಾಸ ಪ್ರಜ್ನೆ ಗೆ ಸಾಕ್ಷಿಯಂತೆ, ಪಕ್ಕದ ಶಾಲೆಯ ಮಕ್ಕಳು ಕಲ್ಲು ಹೊಡಿಯುತ್ತಾರೆ ಅಂತ ಹಾಕಿದ್ದಾರೆ.
ರಾಯಚೂರು ಏಶ್ಯಾ ದಲ್ಲೆ ಎರಡನೆ ಅತಿ ದೊಡ್ಡ ಕೃಷಿ ಮಾರುಕಟ್ಟೆ ಹೊಂದಿದೆ. ಆದರೆ ಊರು ಇನ್ನು ನಾಗರಿಕ ವಾಗಿ ಬಹಳ ಹಿಂದಿದೆ. ರಸ್ತೆಗಳು,ಚರಂಡಿಗಳು ಸರಿಯಿಲ್ಲ. ನಾಗರಿಕ ಪ್ರಜ್ನೆ ಕಡಿಮೆ,  
ಜೋಗುಲಾಂಬ  ಗುಡಿಯ ಮುಂದೆ.
ಬಾಲಬ್ರಹ್ಮ ಗುಡಿ

ವೀರ ಬ್ರಹ್ಮ ಗುಡಿ

ಅರ್ಕ ಬ್ರಹ್ಮ

ರಸ ಸಿದ್ಧ ಬಹುಮುಖ

ಚಾಲುಕ್ಯರ ಕಾಲದ ಕೋಟೆಯ ಪಶ್ಚಿಮ ದ್ವಾರ, ಶ್ರೀ ಶೈಲಕ್ಕೆ ಹೋಗುವವರು ಇಲ್ಲಿ ಸಂಕಲ್ಪ ಮಾಡ ಬೇಕು. 

ತುಂಗಭದ್ರೆಯ ತಟದ ಮೇಲೆ, ದೇಗುಲಗಳ vihaMgamanOTa.


ರಾಯಚೂರಿನ ಕೋಟೆಯ ಮೇಲೆ, ಫಿರಂಗಿಯ ಜೊತೆ, ಹಿಂದೆ ಅಳಿದುಳಿದ ಕಟ್ಟಡ

ನವರಂಗ  ದರ್ವಾಜಾ.


ರಾಯಚೂರಿನ ಕೋಟೆಯ ಮೇlinದ   ಕಾಣುವ ಕೆರೆ    
ಆದರು ನಮ್ಮ ಸಮ್ಮೇಳನ ಭರ್ಜರಿಯಾಗಿ ನಡೆಸಿದರು. ನವೋದಯ ವೈದ್ಯಕೀಯ ವಿದ್ಯಾಲಯದ ದವರಿಗೆ ಶುಭಾಷಯಗಳು.
 

No comments: