Friday, December 16, 2011

simhachala and vishaakhapattana visit.






ಸಿಂಹಾಚಲ ಮತ್ತು ವಿಶಾಖಪಟ್ಟಣ
ವಿಶಾಖಪಟ್ಟಣಕ್ಕೆ ಇದು ನನ್ನ ಐದನೆಯ ಭೇಟಿಯಾಗಿತ್ತು.ಈ ಸಾರಿ ಹೆಂಡತಿಯೊಂದಿಗೆ ಭೇಟಿ.  ವಿಶಾಖಪಟ್ಟಣದಿಂದ ಕೇವಲ ೧೫ ಕಿ ಮೀ ದೂರ ಗುಡ್ಡಗಳ ಮಧ್ಯೆ ಇರುವ ದೇಗುಲ. ಇತಿಹಾಸ ಇದರ ಸ್ಥಾಪನೆಯನ್ನು ೧೦ನೆಯ ಶತಮಾನಕ್ಕೆ ಕೊಂಡೊಯ್ಯುತ್ತದೆ.ವಿಕಿಪೀಡಿಯಾದಲ್ಲಿ ಅನೇಕ ವಿವರಗಳಿವೆ.ಕಳಿಂಗದ ರಾಜರು,ಚೋಳರು ವಿಜಯನಗರದ ಅರಸರು ಸಾಕಷ್ಟು ದಾನದತ್ತಿಗಳನ್ನು ಕೊಟ್ಟಿರುತ್ತಾರೆ.
ನೇರವಾಗಿ ವಿಮಾನ ನಿಲ್ದಾಣದಿಂದ ಸಿಂಹಾಚಲಕ್ಕೆ ನಮ್ಮ ಪ್ರಯಾಣ. ಸುಮಾರು ಏಳೆಂಟು ಕಿ ಮೀ ದೂರ. ಗುಡ್ಡಗಳ ನಡುವೆ ಸಾಕಷ್ಟು ಒಳ್ಳೆಯ ರಸ್ತೆ.ಏರಿಳಿದು ನಾಲ್ಕು ಗುಡ್ಡಗಳ ನಡುವೆ ಎತ್ತರವಾದ ಸ್ಥಳದಲ್ಲಿ ನಿರ್ಮಾಣವಾದ ವಿಸ್ಸಲ ದೇಗುಲ. ೨೫ ವರ್ಷಗಳ ಕೆಳಗೆ ಭೇಟಿ ಕೊಟ್ಟಾಗ ಯಾವ ಅಭಿವೃದ್ದಿ ಕಾರ್ಯ ಗಳು ಆಗಿರಲಿಲ್ಲ. ದಾರಿಯುದ್ದ ಬರೀ ಭಿಕ್ಷುಕರೇ ತುಂಬಿದ್ದರು. ಈಗ ಸಾಕಷ್ಟು ಕೆಲಸಗಳಾಗಿವೆ. ಡಾಮರು ರಸ್ತೆ ಆಗಿದೆ.ದೇವಾಲಯದವರೆಗೂ ಕಾರಿನಲ್ಲೇ ಹೋಗಬಹುದು. ಹತ್ತಲು ಮೆಟ್ಟಿಲುಗಳಿವೆ.ದೊಡ್ಡ ಹನುಮಂತನ ವಿಗ್ರಹ ನಿಮ್ಮನ್ನು ಸ್ವಾಗತಿಸುತ್ತದೆ.
ಸಿಂಹಾಚಲ ಹೆಸರೇ ಹೇಳುವಂತೆ ಲಕ್ಷ್ಮೀನರಸಿಂಹನ ಆವಾಸ ಸ್ಥಾನ. ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಭೂಮಿಗಿಳಿದ ಭಗವಂತ. ಅವನ ಭಾರಕ್ಕೆ ಕಾಲುಗಳು ನೆಲದಲ್ಲಿ ಹೂತು ಹೋಗಿವೆಯಂತೆ.ಮೇಲ್ಭಾಗವನ್ನೆಲ್ಲ ಚಂದನದಲ್ಲಿ ಪೂರ್ಣ ಮುಚ್ಚಿರುತ್ತಾರೆ.
ಉಗ್ರ ನರಸಿಂಹನ ಸಾಂತ್ವನಕ್ಕೆ ಚಂದನದ ಲೇಪ.ವರ್ಷಕ್ಕೊಮ್ಮೆ ಅಕ್ಷಯ ಚಂದನ ಲೇಪ ತೆಗೆದಾಗ ಮೂರ್ತಿ ಕಾಣಿಸುತ್ತದೆ. ದೇವಾಲಯದ ಒಳಗೆ ಎಲ್ಲೂ ಫೋಟೋ ತೆಗೆಯುವಂತಿಲ್ಲ. ಸೆಲ್ ಫೋನ್ ಗಳನ್ನೂ ತೆಗೆದು ಕೊಂಡು ಹೋಗುವಂತಿಲ್ಲ.
ದೇವಾಲಯ ಕಲ್ಲಿನದು. ಹೊರಗೆ ಗೋಡೆಗಳ ಮೇಲೆ ಮೂರ್ತಿಗಳು ಅಲ್ಲಲ್ಲೇ. ಹಿಂಭಾಗದಲ್ಲಿ ನರಸಿಂಹನ ಉಗ್ರಾವತಾರದ ಕೆತ್ತನೆ. ಮಿಥುನ ಶಿಲ್ಪಗಳು ಉಂಟು. ಪ್ರಾಂಗಣದಲ್ಲಿ ಸೌಕರ್ಯಗಳು ಕಡಿಮೆ. ಚಳಿಗಾಲವಾದ್ದರಿಂದ ಅಷ್ಟೇನೂ ಕಷ್ಟವಾಗಲಿಲ್ಲ. ಗರ್ಭ ಗುಡಿಯೊಳಗೆ ಹವಾನಿಯಂತ್ರಕಗಳಿವೆ.ದೇವಾಲಯದ ಹೊರಹೊರಭಾಗದಲ್ಲಿ ಅಚ್ಚುಕಟ್ಟು ಇಲ್ಲ. ಮಣ್ಣಿನ ರಸ್ತೆಗಳು.ಬಂದಿಳಿಯುವವರಿಗೆ ಛತ್ರದ ಸೌಕರ್ಯವಿದೆ ಯಂತೆ.  ಗುಡ್ಡದ ಮೇಲೆ ಬರಲು ಹೋಗಲು ಬಸ್ ಸೌಕರ್ಯವಿದೆ.
ಸುಂದರ ಪ್ರಕೃತಿ ತಾಣ ನೋಡಲು ಅಂದ ದೇವಾಲಯದ ಸುತ್ತಲು ೨-೩ ಕಿ ಮೀ ನಲ್ಲಿ ಬರೀ ಗುಡ್ಡಗಳು ಒಂದಕ್ಕೆ ಕಣಜದ ಗುಡ್ಡ ಎಂದು ಕರೆಯುತ್ತಾರೆ. ಮುಸ್ಲಿಮರ ಆಕ್ರಮಣ ಕಾಲದಲ್ಲಿ ದೇವಾಲಯದ ನಾಶಕ್ಕೆ ಪ್ರಯತ್ನಿಸಿದಾಗ ಪೂಜಾರಿಯ ಪ್ರಾರ್ಥನೆಯಂತೆ ಎದುರಿನ ಗುಡ್ಡದಿಂದ ಕಣಜಗಳ ದಂಡೇ ಮುಟ್ಟಿ ಸೈನಿಕರೆಲ್ಲ ಓಡಿ ಹೋಗಿ ದೇವಾಲಯವನ್ನು ಸ್ವಾಮಿ ರಕ್ಷಿಸಿದನೆಂದು ಕಥೆಯೂ ಉಂಟು.
ಕಳಿಂಗದ ರಾಜರುಏ ದೇವಾಲಯದ ಭಕ್ತರು.ಕೃಷ್ಣದೇವರಾಯ ಎರಡು ಬಾರಿ ಇಲ್ಲಿಗೆ ಬಂದಿದ್ದನಂತೆ.ಕಳಿಂಗದ ಪ್ರತಾಪ ರುದ್ರನನ್ನು ಸೋಲಿಸಿ ಹಿಂದಿರುಗುವಾಗ ಒಮ್ಮೆ.
ನೂರು ರುಪಾಯಿ ಕೊಟ್ಟು ವಿಶೇಷ ದರ್ಶನ ಪಡೆದು ತಿರುಪತಿಯಂತೆ ಇಲ್ಲೂ ಲಡ್ಡುಗಳ ಪ್ರಸಾದ ಪಡೆದೆವು. ಒಳಗೆ ಚಿತ್ರಾನ್ನ ಉಚಿತ ಪ್ರಸಾದ ವಿನಿಯೋಗವು ಇದೆ ಕುಡಿಯಲು ನೀರು ಒಯ್ಯುವುದು ಒಳ್ಳೆಯದು.
೩ ಗಂಟೆಗೆ ಹಿಂತಿರುಗಿ ವಿಶಾಖ ಪಟ್ಟಣ ಸೇರಿ ಇರುವ ಒಳ್ಳೆಯ ಒಂದೇ ಹೋಟೆಲ್ ದಾಸಪಲ್ಲದಲ್ಲಿ ತಂಗಿದೆವು .
ಸ್ಪೈಸ್ ಜೆಟ್ ಎ ಟಿ ಆರ್. ಸುಮಾರು ಒಂದೂವರೆ ಗಂಟೆಗಳಲ್ಲಿ ಪ್ರಯಾಣ ಮುಗಿಸುತ್ತದೆ. ಬಜೆಟ್ ಏರ್ಲೈನ್ ಆದ್ದರಿಂದ ಊಟ ತಿಂಡಿ ಕೊಳ್ಳಬೇಕು. ನೀರು ಪುಕ್ಕಟ್ಟೆ ಕೊಡುತ್ತಾರೆ.



No comments: