Friday, December 16, 2011

simhachala and vishaakhapattana visit.






ಸಿಂಹಾಚಲ ಮತ್ತು ವಿಶಾಖಪಟ್ಟಣ
ವಿಶಾಖಪಟ್ಟಣಕ್ಕೆ ಇದು ನನ್ನ ಐದನೆಯ ಭೇಟಿಯಾಗಿತ್ತು.ಈ ಸಾರಿ ಹೆಂಡತಿಯೊಂದಿಗೆ ಭೇಟಿ.  ವಿಶಾಖಪಟ್ಟಣದಿಂದ ಕೇವಲ ೧೫ ಕಿ ಮೀ ದೂರ ಗುಡ್ಡಗಳ ಮಧ್ಯೆ ಇರುವ ದೇಗುಲ. ಇತಿಹಾಸ ಇದರ ಸ್ಥಾಪನೆಯನ್ನು ೧೦ನೆಯ ಶತಮಾನಕ್ಕೆ ಕೊಂಡೊಯ್ಯುತ್ತದೆ.ವಿಕಿಪೀಡಿಯಾದಲ್ಲಿ ಅನೇಕ ವಿವರಗಳಿವೆ.ಕಳಿಂಗದ ರಾಜರು,ಚೋಳರು ವಿಜಯನಗರದ ಅರಸರು ಸಾಕಷ್ಟು ದಾನದತ್ತಿಗಳನ್ನು ಕೊಟ್ಟಿರುತ್ತಾರೆ.
ನೇರವಾಗಿ ವಿಮಾನ ನಿಲ್ದಾಣದಿಂದ ಸಿಂಹಾಚಲಕ್ಕೆ ನಮ್ಮ ಪ್ರಯಾಣ. ಸುಮಾರು ಏಳೆಂಟು ಕಿ ಮೀ ದೂರ. ಗುಡ್ಡಗಳ ನಡುವೆ ಸಾಕಷ್ಟು ಒಳ್ಳೆಯ ರಸ್ತೆ.ಏರಿಳಿದು ನಾಲ್ಕು ಗುಡ್ಡಗಳ ನಡುವೆ ಎತ್ತರವಾದ ಸ್ಥಳದಲ್ಲಿ ನಿರ್ಮಾಣವಾದ ವಿಸ್ಸಲ ದೇಗುಲ. ೨೫ ವರ್ಷಗಳ ಕೆಳಗೆ ಭೇಟಿ ಕೊಟ್ಟಾಗ ಯಾವ ಅಭಿವೃದ್ದಿ ಕಾರ್ಯ ಗಳು ಆಗಿರಲಿಲ್ಲ. ದಾರಿಯುದ್ದ ಬರೀ ಭಿಕ್ಷುಕರೇ ತುಂಬಿದ್ದರು. ಈಗ ಸಾಕಷ್ಟು ಕೆಲಸಗಳಾಗಿವೆ. ಡಾಮರು ರಸ್ತೆ ಆಗಿದೆ.ದೇವಾಲಯದವರೆಗೂ ಕಾರಿನಲ್ಲೇ ಹೋಗಬಹುದು. ಹತ್ತಲು ಮೆಟ್ಟಿಲುಗಳಿವೆ.ದೊಡ್ಡ ಹನುಮಂತನ ವಿಗ್ರಹ ನಿಮ್ಮನ್ನು ಸ್ವಾಗತಿಸುತ್ತದೆ.
ಸಿಂಹಾಚಲ ಹೆಸರೇ ಹೇಳುವಂತೆ ಲಕ್ಷ್ಮೀನರಸಿಂಹನ ಆವಾಸ ಸ್ಥಾನ. ಹಿರಣ್ಯಕಶಿಪುವಿನ ಸಂಹಾರ ಕಾಲದಲ್ಲಿ ಭೂಮಿಗಿಳಿದ ಭಗವಂತ. ಅವನ ಭಾರಕ್ಕೆ ಕಾಲುಗಳು ನೆಲದಲ್ಲಿ ಹೂತು ಹೋಗಿವೆಯಂತೆ.ಮೇಲ್ಭಾಗವನ್ನೆಲ್ಲ ಚಂದನದಲ್ಲಿ ಪೂರ್ಣ ಮುಚ್ಚಿರುತ್ತಾರೆ.
ಉಗ್ರ ನರಸಿಂಹನ ಸಾಂತ್ವನಕ್ಕೆ ಚಂದನದ ಲೇಪ.ವರ್ಷಕ್ಕೊಮ್ಮೆ ಅಕ್ಷಯ ಚಂದನ ಲೇಪ ತೆಗೆದಾಗ ಮೂರ್ತಿ ಕಾಣಿಸುತ್ತದೆ. ದೇವಾಲಯದ ಒಳಗೆ ಎಲ್ಲೂ ಫೋಟೋ ತೆಗೆಯುವಂತಿಲ್ಲ. ಸೆಲ್ ಫೋನ್ ಗಳನ್ನೂ ತೆಗೆದು ಕೊಂಡು ಹೋಗುವಂತಿಲ್ಲ.
ದೇವಾಲಯ ಕಲ್ಲಿನದು. ಹೊರಗೆ ಗೋಡೆಗಳ ಮೇಲೆ ಮೂರ್ತಿಗಳು ಅಲ್ಲಲ್ಲೇ. ಹಿಂಭಾಗದಲ್ಲಿ ನರಸಿಂಹನ ಉಗ್ರಾವತಾರದ ಕೆತ್ತನೆ. ಮಿಥುನ ಶಿಲ್ಪಗಳು ಉಂಟು. ಪ್ರಾಂಗಣದಲ್ಲಿ ಸೌಕರ್ಯಗಳು ಕಡಿಮೆ. ಚಳಿಗಾಲವಾದ್ದರಿಂದ ಅಷ್ಟೇನೂ ಕಷ್ಟವಾಗಲಿಲ್ಲ. ಗರ್ಭ ಗುಡಿಯೊಳಗೆ ಹವಾನಿಯಂತ್ರಕಗಳಿವೆ.ದೇವಾಲಯದ ಹೊರಹೊರಭಾಗದಲ್ಲಿ ಅಚ್ಚುಕಟ್ಟು ಇಲ್ಲ. ಮಣ್ಣಿನ ರಸ್ತೆಗಳು.ಬಂದಿಳಿಯುವವರಿಗೆ ಛತ್ರದ ಸೌಕರ್ಯವಿದೆ ಯಂತೆ.  ಗುಡ್ಡದ ಮೇಲೆ ಬರಲು ಹೋಗಲು ಬಸ್ ಸೌಕರ್ಯವಿದೆ.
ಸುಂದರ ಪ್ರಕೃತಿ ತಾಣ ನೋಡಲು ಅಂದ ದೇವಾಲಯದ ಸುತ್ತಲು ೨-೩ ಕಿ ಮೀ ನಲ್ಲಿ ಬರೀ ಗುಡ್ಡಗಳು ಒಂದಕ್ಕೆ ಕಣಜದ ಗುಡ್ಡ ಎಂದು ಕರೆಯುತ್ತಾರೆ. ಮುಸ್ಲಿಮರ ಆಕ್ರಮಣ ಕಾಲದಲ್ಲಿ ದೇವಾಲಯದ ನಾಶಕ್ಕೆ ಪ್ರಯತ್ನಿಸಿದಾಗ ಪೂಜಾರಿಯ ಪ್ರಾರ್ಥನೆಯಂತೆ ಎದುರಿನ ಗುಡ್ಡದಿಂದ ಕಣಜಗಳ ದಂಡೇ ಮುಟ್ಟಿ ಸೈನಿಕರೆಲ್ಲ ಓಡಿ ಹೋಗಿ ದೇವಾಲಯವನ್ನು ಸ್ವಾಮಿ ರಕ್ಷಿಸಿದನೆಂದು ಕಥೆಯೂ ಉಂಟು.
ಕಳಿಂಗದ ರಾಜರುಏ ದೇವಾಲಯದ ಭಕ್ತರು.ಕೃಷ್ಣದೇವರಾಯ ಎರಡು ಬಾರಿ ಇಲ್ಲಿಗೆ ಬಂದಿದ್ದನಂತೆ.ಕಳಿಂಗದ ಪ್ರತಾಪ ರುದ್ರನನ್ನು ಸೋಲಿಸಿ ಹಿಂದಿರುಗುವಾಗ ಒಮ್ಮೆ.
ನೂರು ರುಪಾಯಿ ಕೊಟ್ಟು ವಿಶೇಷ ದರ್ಶನ ಪಡೆದು ತಿರುಪತಿಯಂತೆ ಇಲ್ಲೂ ಲಡ್ಡುಗಳ ಪ್ರಸಾದ ಪಡೆದೆವು. ಒಳಗೆ ಚಿತ್ರಾನ್ನ ಉಚಿತ ಪ್ರಸಾದ ವಿನಿಯೋಗವು ಇದೆ ಕುಡಿಯಲು ನೀರು ಒಯ್ಯುವುದು ಒಳ್ಳೆಯದು.
೩ ಗಂಟೆಗೆ ಹಿಂತಿರುಗಿ ವಿಶಾಖ ಪಟ್ಟಣ ಸೇರಿ ಇರುವ ಒಳ್ಳೆಯ ಒಂದೇ ಹೋಟೆಲ್ ದಾಸಪಲ್ಲದಲ್ಲಿ ತಂಗಿದೆವು .
ಸ್ಪೈಸ್ ಜೆಟ್ ಎ ಟಿ ಆರ್. ಸುಮಾರು ಒಂದೂವರೆ ಗಂಟೆಗಳಲ್ಲಿ ಪ್ರಯಾಣ ಮುಗಿಸುತ್ತದೆ. ಬಜೆಟ್ ಏರ್ಲೈನ್ ಆದ್ದರಿಂದ ಊಟ ತಿಂಡಿ ಕೊಳ್ಳಬೇಕು. ನೀರು ಪುಕ್ಕಟ್ಟೆ ಕೊಡುತ್ತಾರೆ.



Sunday, May 15, 2011

visit to Honnavalli,Tiptur taluk.


ಹೊನ್ನವಳ್ಳಿ ಇದು ತಿಪಟೂರು ತಾಲೂಕಿನ ಒಂದು ದೊಡ್ಡ ಹಳ್ಳಿ ಈಗ.ಆದರೆ ಇತಿಹಾಸದಲ್ಲಿ ಬಹಳ ಹೆಸರಾದ ಸ್ಥಳ. ೮೦೦ ವರ್ಷಗಳಿಗು ಹಿಂದೆ ಒಬ್ಬ ಪಾಳ್ಳೆಗಾರನಿಂದ ಸ್ತಾಪಿಸಲ್ಪಟ್ಟ ಹಳ್ಳಿ.ಹಾರನಹಳ್ಳಿ ರಾಜ್ಯದ ಗಡಿ ಸೀಮೆಯಾದ್ದರಿಂದ ಇಲ್ಲಿ ಒಂದು ಕೋಟೆ ಕೂಡ ಇದೆ.ಹೊಯ್ಸಳರು,ನಂತರ ವಿಜಯನಗರದ ಅರಸರು ನಂತರ ಇಕ್ಕೇರಿಯ ನಾಯಕರು ಆಳಿ ಮೈಸೂರು ಅರಸರ ಕೈ ಸೇರಿತು. ಹೈದರನ  ನಂತರ  ಮತ್ತೆ ಮೈಸೂರರಸರ ಕೈಗೆ ಬಂತು. ಹೊನ್ನವಳ್ಳಿ ಹೆಸರಾದದ್ದೆ ಆ ಊರಿಗೆ ಹೊನ್ನಿನ ಮಳೆ ಸುರಿದಿದ್ದರಿಂದ ಅಂತೆ. ಊರಿನಲ್ಲಿ ೨೪ ದೇವಾಲಯಗಳಿವೆ ,೨೪ ರಲ್ಲು ಈಗಲು ಪ್ರತಿದಿನ ಪೂಜೆ ನಡೆಯುತ್ತದೆ.ದೊಡ್ಡದೆಂದರೆ ಲಕ್ಶ್ಮಿನರಸಿಂಹಸ್ವಾಮಿ, ಹೊಯ್ಸಳರ ಕಾಲದ್ದೆಂದು ಪ್ರತೀತಿ. ಮಾದರಿ ಯೇನೊ ಅವರದ್ದೆ. ಆದರೆ ಸಾಧಾರಣ.ಒಳ ಅಥವ ಹೊರ ಗೋಡೆಗಳ ಮೇಲೆ ಅಲಂಕಾರಗಳೇ ಇಲ್ಲ. ಪೂಜೆಗೊಳ್ಳುವ ವಿಗ್ರಹಗಳು ಮಾತ್ರ ಸುಂದರ.



ನಮ್ಮ ಗುರು ಪುತ್ರ ಕೃಷ್ಣಮೂರ್ತಿಯ ಕೃಪೆ ಇಂದಿನ ನಮ್ಮ ಭೇಟಿ ಅಲ್ಲಿಗೆ. ಹೋಮ ಹವನ ಪ್ರವಚನಗಳು ಎಲ್ಲ ಇತ್ತು.ಕೈಲಾಸೇಶ್ವರ ದೇವಾಲಯ ಊರ ಹೊರಗೆ ತೋಟದಲ್ಲಿ. ಪುರಾತನ ವಾದರು ಅತಿ ಸಾಧಾರಣ.ತಲೆ ಬಗ್ಗಿಸಿ ಒಳಗೆ ಹೋಗಬೇಕು. ಆರಡಿ ಎತ್ತರದ ಛಾವಣಿ. 






Monday, April 18, 2011

ಬೆಳವಾಡಿ ಮತ್ತು ಜಾವಗಲ್ ದೇಗುಲಗಳು

ಭಾನುವಾರ, ಏಪ್ರಿಲ್ ೧೭ ರಂದು ಹುಟ್ಟಿದೂರಿಗೆ ಭೇಟಿ ಮಾಮೂಲಿನಂತೆ. ದಿನದ ಘಟನೆಗಳು ಮನಸ್ಸನ್ನು ಕಲಕಿದ್ದವು. ದಾಸವರೇಣ್ಯ ಪುರಂದರ ದಾಸರ ಪದ ನೆನಪಿಗೆ ಬರುತ್ತಿತ್ತು. ಮುನ್ನ ಶತ ಕೋಟಿ ರಾಯರುಗಳಾಳಿದ ಭೂಮಿಯನು ತನದೆಂದು--. ಮಹಭಾರತ ಯುದ್ಧ ಏಕೆ ನಡೆಯಿತೆಂದು ಪದೇ ಪದೇ ಮನಸ್ಸು ಕೇಳುತ್ತಿತ್ತು,ಹೇಳುತ್ತಿತ್ತು. ದುರ್ಯೋಧನ ಕೆಟ್ಟವನೇನಲ್ಲ ವೆಂದೆನಿಸುತ್ತಿತ್ತು. ಹಸ್ತಿನಾಪುರದ ರಾಜ ತಾನೆ ಆಗಬೇಕೆಂದಿದ್ದರೂ ಅನುಜರನ್ನು ಅಸಭ್ಯವಾಗಿ ನಡೆಸಿ ಕೊಂಡವನೇನಲ್ಲ. ಇಂದಿನ ದುರ್ಯೋಧನರು ಹಾಗೇನಲ್ಲ????.

ಮಾನಸಿಕ ತುಮುಲಕ್ಕೆ ಒಳಗಾಗಿದ್ದ ನನಗೆ ಶಾಂತಿ ಬೇಕಿತ್ತು. ಅದೇನೊ ಸಂದರ್ಭ ಒದಗಿ ಬಂತು. ನಮ್ಮೂರಿನಿಂದ ಕೇವಲ ೫೦-೬೦ ಕಿ ಮೀ ದೂರದಲ್ಲಿದ್ದ ಹೊಯ್ಸಳರ ಶಿಲ್ಪಕಲೆಗೆ ಸಾಕ್ಷಿಯಾಗಿದ್ದ ಎರಡು ದೇವಾಲಯಗಳ ದರ್ಶನ ಲಭಿಸಿತು.

ಕ್ರಿಕೆಟರ್ ಶ್ರೀನಾಥ ನ ಜಾವಗಲ್ಲಿನ ಲಕ್ಷ್ಮಿನರಸಿಂಹ ಮತ್ತು ಬೆಳವಾಡಿಯ ವೀರನಾರಾಯಣ. ಜಾವಗಲ್ಲಿನದು ಚಿಕ್ಕದು,ತ್ರಿಕೂಟಾಚಲ. ಬೆಳವಾಡಿಯದೂ ತ್ರಿಕೂಟಾಚಲ. ಆದರೆ ಗಾತ್ರದಲ್ಲಿ ಬಹಳ ದೊಡ್ಡದು. ಜಾವಗಲ್ಲಿನ ದೇವಾಲಯ ಶಿಥಿಲಾವಸ್ಥೆಯಲ್ಲಿದೆ,ಆದರೆ ಈಗ ನವೀಕರಣ ನಡೆಯುತ್ತಿದೆ.

ದೇವಾಲಯದ ಹೊರ ಗೋಡೆಗಳೆಲ್ಲ ಕೆತ್ತನೆಗಳಿಂದ ಅಲಂಕೃತ. ಒಳಗೆ ತ್ರಿಕೂಟ ಗರ್ಭ ಗೃಹಗಳ ಮಧ್ಯೆ ಚಿಕ್ಕಮಂಟಪ,ಚೊಕ್ಕ ಸುಂದರ ದೇವಾಲಯ.

ಬೆಳವಾಡಿ ಜಾವಗಲ್ಲಿನಿಂದ ೭ ಕಿ ಮೀ ,ಬೇಲೂರು ಚಿಕ್ಕಮಗಳೂರು ರಸ್ತೆಯಲ್ಲಿದೆ. ಸುತ್ತ ಸುಂದರ ಹುಲ್ಲು ಹಾಸು ಮಧ್ಯೆ ಸುಸ್ಥಿತಿಯಲ್ಲಿರುವ ದೇವಾಲಯ.ಬೇಲೂರು ಹಳೇಬೀಡು ದೇವಾಲಯಗಳಿಗಿಂತ ಸ್ವಲ್ಪ ಭಿನ್ನವಾದರು ಅಷ್ಟೇ ದೊಡ್ಡದು. ಮೂರು ಗರ್ಭಗೃಹಗಳು,ಶುಕನಾಸ,ಮಂಟಪ ಅಲ್ಲದೆ ದೊಡ್ಡದಾದ ದ್ವಾರಮಂಟಪ.

ಗರ್ಭಗೃಹಗಳಿಗೆ ಹೊರ ಮೈಮೇಲೆ ಹೊಯ್ಸಳ ಶಿಲ್ಪಿಗಳ ಕೈ ಚಳಕದಿಂದ ಮೂಡಿ ಬಂದ ಶಿಲ್ಪಗಳು.ಅದು ಬಿಟ್ಟರೆ ಬೇರೆಲ್ಲೂ ಶಿಲ್ಪಗಳಿಲ್ಲ ದ್ವಾರದಲ್ಲಿ ಎರದು ಬೃಹತ್ ಆನೆಗಳು.ಆದರೆ ಎಲ್ಲು ಹೊಯ್ಸಳ ಲಾಂಛನ ಕಾಣಲಿಲ್ಲ.

ತ್ರಿಕೂಟಾಚಲದ ಗರ್ಭಗೃಹಗಳಲ್ಲಿರುವ ಪ್ರತಿಮೆಗಳು ವೀರನಾರಾಯಣ , (ಇದೇ ದೇವಾಲಯದ ಹೆಸರು), ಯೋಗಾನರಸಿಂಹ ಮತ್ತು ಗೋಪಾಲಕೃಷ್ಣ. ಗೋಪಾಲ ಕೃಷ್ಣ ಮೂರ್ತಿ ವಾಸ್ತು ಶಿಲ್ಪದ ನಿಯಮಗಳಿಗೆ ಅನುಗುಣವಾಗಿ ನಿರ್ಮಿಸಿರುವ ಭಾರತದಲ್ಲೆ ಅತ್ಯಂತ ಸುಂದರ ಮೂರ್ತಿ ಎಂದು ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆಯವರ ಅಂಬೋಣ.

ಶಾಸನಗಳಿಗಾಗಿ ಹುಡುಕಾಡಿದೆ.ಒಂದು ಹೊರಗಿನ ದ್ವಾರ ಮಂಟಪದಲ್ಲಿದೆ.ಓದಲು ಅಕ್ಷರಗಳು ಸ್ಫುಟವಾಗಿರಲಿಲ್ಲ. ಒಂದೆರಡು ಸಾಲು ಮಂಟಪದ ಮೇಲಿದೆ.

ಬೆಳವಾಡಿ,ಹಳೆಬೀಡಿನಿಂದ ಕೇವಲ ೧೦ ಕಿ ಮೀ ದೂರ,ಬೇಲೂರಿನಿಂದ ೧೩ ಕಿ ಮೀ ಮತ್ತು ಜಾವಗಲ್ಲಿನಿಂದ ೭ ಕಿ ಮೀ ದೂರದಲ್ಲಿದೆ. ಹಾಸನಕ್ಕೆ ೩೦ ಕಿ ಮೀ ಮತ್ತು ಅರಸಿಕೆರೆಯಿಂದ ೪೦ ಕಿ ಮೀ ದೂರದಲ್ಲಿದೆ.ಚಿಕ್ಕಮಗಳೂರು ಜಿಲ್ಲೆಗೆ ಸೇರಿದೆ. ನನ್ನ ಮಿತ್ರ ರಾದ ದಿ: ಕೃಷ್ಣ ಮೂರ್ತಿ ಎಮ್ ಎಲ್ ಸಿ ಯವರ ಊರು.ನೆನಪಿಗೆ ಬಂದರು.

ಈಗ ಪ್ರಾಚ್ಯ ವಸ್ತು ಇಲಾಖೆಯವರ ಆದೇಶದಿಂದ ದೇವಾಲಯದ ಸುತ್ತ ೧೦೦ ಮೀ ತೆರವು ಗೊಳಿಸಬೇಕೆನ್ದು ಆದೇಶ ಬಂದಿದೆ.ನೂರಾರು ವರ್ಷಗಳಿಂದ ಸುತ್ತ ಮುತ್ತ ವಾಸವಾಗಿದ್ದವರಿಗೆ ಕಂಟಕ ಪ್ರಾಯ.ಕಾದು ನೋಡಬೇಕು.

ಬಹಳಷ್ಟು ದೇವಾಲಯಗಳ ದುಸ್ಥಿತಿಗೆ ಸುತ್ತಲಿನ ಜನರೇ ಕಾರಣ.ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಜ್ನೆ ಇಲ್ಲದ ಜನರಿಂದ ಸಾಕಷ್ಟು ಪುರಾತನ ಸ್ಮಾರಕಗಳು ನಾಶವಾಗಿವೆ,ಆಗುತ್ತಿವೆ.

ಮಾನವ ಇತಿಹಾಸದಲ್ಲೇ ಅತ್ಯುನ್ನತ ಶಿಲ್ಪಕಲಾ ದೇಗುಲಗಳ ಸೃ ಷ್ಟಿಗೆ ಕಾರಣರಾದ ಹೊಯ್ಸಳರ ನಾಡಿನಲ್ಲಿರುವ ನಾವು ಇದರ ಬಗ್ಗೆ ಯೋಚಿಸಬೇಕು.

ಮರೆತದ್ದು - ಇತ್ತೀಚೆಗೆ ನಾನು ನೋಡಿದ ದಂಬಳದ (ಗದಗ) ಕಲ್ಯಾಣದ ಚಾಲುಕ್ಯರ ದೊಡ್ಡಬಸಪ್ಪ ದೇವಾಲಯವೊಂದೆ ಪರಿಸರ ಕಾಪಾಡುವಲ್ಲಿ ಮತ್ತು ಸುಸ್ಥಿತಿಯಲ್ಲಿ ಇರುವ ಇನ್ನೊಂದು ಉದಾಹರಣೆ.

















Friday, January 21, 2011

Boranakanive

ಬೆಂಗಳೂರಿನಿಂದ  ೧೫೦ ಕಿ ಮೀ ದೂರದ ಬೋರನಕಣಿವೆ ಬಹಳ  ಜನರಿಗೆ ಗೊತ್ತಿಲ್ಲ ಅಂತ ಕಾಣುತ್ತೆ. ಸಿರಾ ಹುಳಿಯಾರ್ ರಸ್ತೆಯಲ್ಲಿ ಸುಮಾರು ಸಿರಾದಿಂದ ೩೫ ಕಿ ಮೀ ದೂರದಲ್ಲಿ ದೇ. ಸಿರಾವರೆಗೂ ಹೆದ್ದಾರಿ ಅಲ್ಲಿಂದ ಸಾಕಷ್ಟು ಹಾಳಾದ ರಸ್ತೆ.      ಬೋರನ ಕಣಿವೆ ಒಂದು ಮುದ್ದಾದ ಪುಟ್ಟ  ಅಣೆಕಟ್ಟೆ. ಎರಡು ಗುಡ್ಡಗಳನ್ನು  ತಾಟು ಹಾಕಿದ್ದಾರೆ. ೧೮೯೨ ರಲ್ಲಿ ಪೂರ್ಣಗೊಂಡ  ಈ ಕಟ್ಟೆ  ೨೫ ವರ್ಷಗಳಲ್ಲಿ ಮೊದಲ ಬಾರಿಗೆ ತುಂಬಿದೆ.  ಹತ್ತಿರದಲ್ಲೇ ವಿಧ್ಯುತ್ ಉತ್ಪಾದಿಸುವ ಗಾಳಿ ರಾಟೆಗಳು ಕಾಣ ಸಿಗುತ್ತವೆ.   ಅಲ್ಲಿ ಊಟ ತಿಂಡಿ ಏನು ಸಿಗೋಲ್ಲ.  ಎಲ್ಲ ನಾವೇ ಕೊಂಡೊಯ್ಯ ಬೇಕು. ಇನ್ನು ಹಾಳಾಗದ ಪರಿಸರ.