Tuesday, January 13, 2009

ಅರಳಿದ ಹೂವಿಗೆ (ರಾಬರ್ಟ್ ಹೆರ್ರಿಕ್ ನ "ಟು ಬ್ಲಾಸಂಸ್" ಕವಿತೆಯ ಸರಳಾನುವಾದ.)

ಬದುಕಿನೊಲುಮೆಯ ತರು ಮುಡುಪಿಟ್ಟ
ಫಲವೆನೀನೇಕೆ ಅಳಿವೆ
ಕ್ಷಣದೊಳಗೆಬಂದಿಲ್ಲ ನಿನಗಿನ್ನು ಕಾಲ
ಇಲ್ಲಿರಲು ನೀನು ಕೆಲ ಕಾಲ
ಕೆಂಪಡರಿ ಮುಗುಳುನಗೆ ಬೀರಿ
ಬಳಿಕವೇ ನಿನ್ನಗಲುವಿಕೆಯಲ್ಲವೆ
ನಿನ್ನ ಚೇತನ ಬುವಿಗಿಳಿದ ಕಾರಣವೇನು
ಕ್ಷಣವರೆಕ್ಷಣದ ಉಲ್ಲಾಸಕೆ
ಮರುಗಳಿಗೆ ಪಾಡುವ ವಿದಾಯಕೆ?
ದುರ್ದೈವ ಪ್ರಕೃತಿ ನಿನಗೆ ಕೊಟ್ಟ ಹುಟ್ಟು
ಕ್ಷಣಿಕ ಸುಖವ ನೀ ಕೊಟ್ಟು
ಅರಿಯದಲೇ ಕ್ಷಯಿಸುವ ನಿನ್ನದೇನು ಗುಟ್ಟು
ನಿನ್ನ ತಳಿರೆಲೆಗಳಲಿ ಬರೆದಿಟ್ಟ
ವಿಧಿಯ ಲಿಖಿತವನೋದಿ ಆಳಿವ ಗುಟ್ಟನರಿವೆ
ಹಮ್ಮಿಳಿದ ಬಳಿಕ ನಿನ್ನಂತೆ ಕ್ಷಣಿಕವೀ ಜೀವನವು
ಎಂಬರಿವು ಮೂಡಿತೆರಳುವೆನು ಜವರಾಯನೋಲಗಕೆ.

Saturday, January 10, 2009

ಕಳೆದು ಹೋದವರ ಬದುಕು

ಮಡಿಯಲ್ಲಿ ಜೊತೆಯಾಗಿ ಬೆಳೆದ ಸಸಿಗಳು
ನಾಟಿಯಲಿ ದೂರಾದ ಪುಟಾಣಿ ಗಿಡಗಳು
ಕಾಲದಲಿ ಮಾಗಿ ತೊಯ್ದಾಡಿ ತೆನೆಗಳು
ಬಲಿತ ಕಾಳಾಗಿದೆ ತಟ್ಟೆಯಲಿ ಅಗುಳು.

ತುಡಿಯುತಿದೆ ಮನ ಹಗಲಿರುಳು
ಕರುಳುರಿಯುತಿದೆ ಕಂಡದ್ದು ಬರಿ ನೆರಳು
ಒಡಲ ಬಂಧನವ ಕಳೆದು ಕೂಡುವವರು
ಒಡಲಾಳದ ಸಂಕಟವ ಅರಿಯದವರು.

ಹಾದಿ ಬೀದಿಯಲಿ ಕೇಳಿಸಿದ ದನಿ
ಉಮ್ಮಳಿಸಿ ಹರಿಸಿ ಕಣ್ಣೀರ ಹನಿ
ಬಾಂಧವ್ಯಗಳ ಬಿರುಕು ತೋಯಿಸಿದೆ
ಬದುಕನರ್ಥೈಸಲಾರದೆ ಜೀವ ನೊಂದಿದೆ.

Tuesday, November 11, 2008











ಒಂದು ಪ್ರವಾಸದ ಸುತ್ತ.

ಬಹಳ ದಿನಗಳಿಂದ ಕಾಡುತ್ತಿದ್ದ ಪ್ರವಾಸದ ಬಯಕೆ ಅಂದು ಭಾನುವಾರ ಈಡೇರಿತು. ಬೆಳಗಿನ ೬ ಗಂಟೆಗೆ ಬೆಂಗಳೂರಿನಿಂದ ಹೊರಟು ಮೊದಲು ಆದಿ ಚುಂಚನಗಿರಿ ಹೊಸ ಕಾಲಭೈರವನನ್ನು ನೋಡಿ ನಂತರ ನಾಗಮಂಗಲದಲ್ಲಿ ಹೊಯ್ಸಳರ ಕಾಲದ ಸೌಮ್ಯಕೇಶವನ ಆವಾಸ ಸ್ಥಾನ, ಅದಕ್ಕೂ ಹಳೆಯ (ಅಲ್ಳಿಯಅರ್ಚಕರ ಹೇಳಿಕೆಯಂತೆ) ಲಕ್ಷ್ಮಿನಾರಾಯಣನ ದೇವಾಲಯ ನೋಡಿದ್ದಾಯಿತು. ಅಲ್ಲಿಂದ ಮುಂದೆ ಮೇಲ್ಕೋಟೆ ಗೆ ನಮ್ಮ ಪ್ರಯಾಣ. ಬೆಟ್ಟದ ಮೇಲೆ ಹತ್ತಿ ಹಕ್ಕಿಯ ನೋಟ ನೋಡಿ ಇಳಿದ ಮೇಲೆ ಚೆಲುವ ನಾರಾಯಣನ ದರ್ಶನ. ಅಲ್ಳಿಯ ಶ್ರೀ ನರಸರಾಜ ಭಟ್ಟರ ಸಹಾಯ ಊಟಕ್ಕೆ ದಾರಿ. ಇದ್ದಕ್ಕಿದ್ದಂತೆ ಹೊಸ ಹೊಳಲು ನೋಡ ಬೇಕೆನಿಸಿತು. ಕೆ ಆರ್ ಪೇಟೆಯ ಹತ್ತಿರ ೩ ಕಿ ಮೀ ದೂರದಲ್ಲಿರುವ ಆ ಊರು ಕೇವಲ ೨೪ ಕಿ ಮೀ ದೂರ ಹತ್ತಿರದಲ್ಲೆ ಇದ್ದಂತಿತ್ತು. ಬೇಲೂರು ಹಳೇಬೀಡು ನೋಡದವರು, ನೋಡಿದವರು ಕೂಡ ನೋಡಲೇಬೇಕಾದ ದೇವಾಲಯ ಅದು. ಅಲ್ಲಿಂದ ನಮ್ಮ ಪಯಣ ಮತ್ತೆ ಮೆಲ್ಕೋಟೆಗೆ. ಕಲ್ಯಾಣಿಗೆ ಭೇಟಿ. ನಾವು ಮೊದಲೇ ನಿರ್ಧರಿಸಿದ್ದಂತೆ ಬಸರಾಳು ಮಲ್ಲಿಕಾರ್ಜುನ ದೇವಾಲಯ ನಮ್ಮ ಆದ್ಯತೆಯಾಗಿತ್ತು. ಅಂತರ್ಜಾಲದಲ್ಲಿ ನೋಡಿದ ಚಿತ್ರ ದಲ್ಲಿ ಕಂಡ ದೃಶ್ಯ ಸಾಕಾರವಾಗಿತ್ತು. ಪಲ್ಲವಿಯ ಸಹಾಯ ನೆನೆಯಲೇ ಬೇಕು.