Tuesday, January 13, 2009

ಅರಳಿದ ಹೂವಿಗೆ (ರಾಬರ್ಟ್ ಹೆರ್ರಿಕ್ ನ "ಟು ಬ್ಲಾಸಂಸ್" ಕವಿತೆಯ ಸರಳಾನುವಾದ.)

ಬದುಕಿನೊಲುಮೆಯ ತರು ಮುಡುಪಿಟ್ಟ
ಫಲವೆನೀನೇಕೆ ಅಳಿವೆ
ಕ್ಷಣದೊಳಗೆಬಂದಿಲ್ಲ ನಿನಗಿನ್ನು ಕಾಲ
ಇಲ್ಲಿರಲು ನೀನು ಕೆಲ ಕಾಲ
ಕೆಂಪಡರಿ ಮುಗುಳುನಗೆ ಬೀರಿ
ಬಳಿಕವೇ ನಿನ್ನಗಲುವಿಕೆಯಲ್ಲವೆ
ನಿನ್ನ ಚೇತನ ಬುವಿಗಿಳಿದ ಕಾರಣವೇನು
ಕ್ಷಣವರೆಕ್ಷಣದ ಉಲ್ಲಾಸಕೆ
ಮರುಗಳಿಗೆ ಪಾಡುವ ವಿದಾಯಕೆ?
ದುರ್ದೈವ ಪ್ರಕೃತಿ ನಿನಗೆ ಕೊಟ್ಟ ಹುಟ್ಟು
ಕ್ಷಣಿಕ ಸುಖವ ನೀ ಕೊಟ್ಟು
ಅರಿಯದಲೇ ಕ್ಷಯಿಸುವ ನಿನ್ನದೇನು ಗುಟ್ಟು
ನಿನ್ನ ತಳಿರೆಲೆಗಳಲಿ ಬರೆದಿಟ್ಟ
ವಿಧಿಯ ಲಿಖಿತವನೋದಿ ಆಳಿವ ಗುಟ್ಟನರಿವೆ
ಹಮ್ಮಿಳಿದ ಬಳಿಕ ನಿನ್ನಂತೆ ಕ್ಷಣಿಕವೀ ಜೀವನವು
ಎಂಬರಿವು ಮೂಡಿತೆರಳುವೆನು ಜವರಾಯನೋಲಗಕೆ.

Saturday, January 10, 2009

ಕಳೆದು ಹೋದವರ ಬದುಕು

ಮಡಿಯಲ್ಲಿ ಜೊತೆಯಾಗಿ ಬೆಳೆದ ಸಸಿಗಳು
ನಾಟಿಯಲಿ ದೂರಾದ ಪುಟಾಣಿ ಗಿಡಗಳು
ಕಾಲದಲಿ ಮಾಗಿ ತೊಯ್ದಾಡಿ ತೆನೆಗಳು
ಬಲಿತ ಕಾಳಾಗಿದೆ ತಟ್ಟೆಯಲಿ ಅಗುಳು.

ತುಡಿಯುತಿದೆ ಮನ ಹಗಲಿರುಳು
ಕರುಳುರಿಯುತಿದೆ ಕಂಡದ್ದು ಬರಿ ನೆರಳು
ಒಡಲ ಬಂಧನವ ಕಳೆದು ಕೂಡುವವರು
ಒಡಲಾಳದ ಸಂಕಟವ ಅರಿಯದವರು.

ಹಾದಿ ಬೀದಿಯಲಿ ಕೇಳಿಸಿದ ದನಿ
ಉಮ್ಮಳಿಸಿ ಹರಿಸಿ ಕಣ್ಣೀರ ಹನಿ
ಬಾಂಧವ್ಯಗಳ ಬಿರುಕು ತೋಯಿಸಿದೆ
ಬದುಕನರ್ಥೈಸಲಾರದೆ ಜೀವ ನೊಂದಿದೆ.